ನ್ಯೂಸ್

BBK11: 'ತಾಯಿತ' ಅನ್ನೋ ಒಂದೇ ಒಂದು ವಿಚಾರ... ರಣರಂಗವಾಯ್ತು 'ಬಿಗ್' ಮನೆ

ಮೋಹನ್​ ಶೆಟ್ಟಿ

ಬೆಂಗಳೂರು: ಕನ್ನಡದ ಬಿಗ್ ಬಾಸ್​ ಸೀಸನ್​ 11 ಈಗ 100 ದಿನಗಳತ್ತ ಸಮೀಪಿಸುತ್ತಿದ್ದು, ಶತಕ ದಿನಗಳ ಪೂರೈಸಲು ಇನ್ನೇನು ಕೆಲವು ದಿನಗಳಷ್ಟೇ ಬಾಕಿಯಿದೆ. ಹೀಗಿರುವಾಗಲೇ ಕಳೆದ ವಾರದ ನಾಮಿನೇಷನ್ ಬಿಸಿಯಲ್ಲಿದ್ದ ಸ್ಪರ್ಧಿಗಳ ಪೈಕಿ ಶಿಶಿರ್​ ಮನೆಯಿಂದ ಹೊರಬಂದರು. ಆದರೆ, ಶಿಶಿರ್​ ಎಲಿಮಿನೇಷನ್ ಬೆನ್ನಲ್ಲೇ ಗೋಲ್ಡ್ ಸುರೇಶ್​ ಹೊರಬಂದಿದ್ದು, ಇಡೀ ಮನೆ ಸೇರಿದಂತೆ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿತು. ಸದ್ಯ ಇದರ ಬೆನ್ನಲ್ಲೇ ಪೈಪೋಟಿಗೆ ಇಳಿದಿರುವ ಮನೆಯ ಸ್ಪರ್ಧಿಗಳ ಮಧ್ಯೆ 'ತಾಯಿತ ಕಟ್ಟಿಸಿಕೊಳ್ಳುವ' ವಿಚಾರ ಇದೀಗ ತೀವ್ರ ಗದ್ದಲ ಉಂಟುಮಾಡಿದೆ.

ಕಳೆದ ವಾರ ಸುದೀಪ್​ ಅವರ ಸಂಚಿಕೆಯಲ್ಲಿ ವೀಕ್ಷಕರ ಮತ ಗಳಿಸಿ, ಸೇಫ್ ಆದ ರಜತ್​, ಮನೆ ಮಂದಿಗೆಲ್ಲಾ ಒಂದು ಎಚ್ಚರಿಕೆಯ ಸಂದೇಶ ರವಾನಿಸಿದರು. ಈ ಸಂದರ್ಭದಲ್ಲಿ ಇಡೀ ಮನೆಗೆ ಟಕ್ಕರ್​ ಕೊಟ್ಟ ರಜತ್​, ನನ್ನನ್ನು ಕೆಣಕುವ ಪ್ರಯತ್ನ ಮಾಡಿದರೆ, ನನ್ನ ಅಸಲಿ ಆಟ ತೋರಿಸ್ತೀನಿ. ಆಗ ಎಲ್ಲರೂ ತಾಯಿತ ಕಟ್ಟಿಸಿಕೊಳ್ಳಬೇಕಷ್ಟೇ ಎಂದು ತಮ್ಮ ಖಡಕ್​ ಮಾತುಗಳನ್ನು ಸುದೀಪ್ ಎದುರಿಗೆ ಹೇಳಿದ್ದರು. ರಜತ್​ನ ಕೆರಳಿಸುವ ಮಾತುಗಳು ಮನೆಯವರಲ್ಲಿ ಕಿಚ್ಚು ಹಚ್ಚಿಸಿದ್ದೇ ಆದರೂ ಯಾರೊಬ್ಬರು ಆ ಕ್ಷಣಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಅದೇ ಸಿಡಿಮಿಡಿ ಈಗ ಟಾಸ್ಕ್​ನಲ್ಲಿ ಹೊರಬರುತ್ತಿದೆ.

ಇಂದು ಕೊಟ್ಟ ಟಾಸ್ಕ್​ನಲ್ಲಿ ಚೈತ್ರಾ ಉಸ್ತುವಾರಿಯನ್ನು ಖಂಡಿಸಿರುವ ರಜತ್​, ಚೈತ್ರಾ ಮಾತಿಗೆ ಸಿಟ್ಟಾಗಿ ಬಿಗ್ ಬಾಸ್​ ಕೊಟ್ಟ ಚುಟುವಟಿಕೆಯ ವಸ್ತುಗಳನ್ನು ಉರುಳಿಸಿದ್ದಾರೆ. ಈ ವೇಳೆ ಚೈತ್ರಾ, ರಜತ್​ ಅವರ ತಾಯಿತ ಕಟ್ಟಿಸಿಕೊಳ್ಳುವ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಮನೆಯವರ ಮಧ್ಯೆ ದೊಡ್ಡ ಜಟಾಪಟಿ ಭುಗಿಲೆದ್ದಿದ್ದೇ ತಡ ಮಂಜು ಮತ್ತು ರಜತ್​ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿದ್ದು, ಕೈ-ಕೈ ಮಿಲಾಯಿಸುವ ಹಂತ ತಲುಪಿದೆ. ಅಸಲಿಗೆ ಏನಾಯಿತು, ಜಗಳಕ್ಕೆ ಕಾರಣವೇನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಿ ತಿಳಿಯಬೇಕಿದೆ.