ನ್ಯೂಸ್

ನಿರಾಣಿ ಬಚ್ಚಾ ಹೌದೋ ಅಲ್ವೋ ಅನ್ನೋದು ಜನರಿಗೆ ಗೊತ್ತಿದೆ; ಕಿಡಿಕಾರಿದ ಯತ್ನಾಳ್

ವಿಜಯಪುರ: ‘‘ಬಸನಗೌಡ ಪಾಟೀಲ್ ಯತ್ನಾಳ ಅವರು ಮೊನ್ನೆ ದೆಹಲಿಯಲ್ಲಿ ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಬಂದಿದ್ದೇಕೆ? ತಮ್ಮನ್ನು ಮತ್ತು ಯಡಿಯೂರಪ್ಪ ಅವರನ್ನು ಒಂದು ಮಾಡಿ ಅಂತ ಕಾಲಿಗೆ ಬಿದ್ದು ಬಂದಿಲ್ವಾ...?’’ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಶ್ನಿಸಿದ್ದರು.

ಇದೀಗ ಈ ವಿಚಾರವಾಗಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಸಚಿವ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ''ನಾನು ಯಾರ ಕಾಲು ಹಿಡಿಯಲೂ ಹೋಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್​.ಕೆ.ಅಡ್ವಾನಿ ಅವರ ಕಾಲಿಗೆ ನಮಸ್ಕಾರ ಮಾಡಿದ್ದೇನೆ. ತುಮಕೂರು ಸಿದ್ಧಗಂಗಾ, ಸಿದ್ಧೇಶ್ವರ ಶ್ರೀಗಳ ಕಾಲಿಗೂ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡಿದ್ದೇನೆ'' ಎಂದು ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ ಹೇಳಿಕೆ ನೀಡಿದ್ದಾರೆ.

ಶಾಸಕ ಯತ್ನಾಳ್ ನಿರಾಣಿ ವಿರುದ್ಧ ಆಕ್ರೋಶ ಹೊರಹಾಕುತ್ತಾ, ನಾನು ಯಾವುದೇ ಕಾರಣಕ್ಕೂ ತಲೆ ಹಿಡುಕ ಸ್ವಾಮಿಗಳ ಕಾಲಿಗೆ ಬಿದ್ದಿಲ್ಲ ಎಂದು ಹೇಳುತ್ತಾ ಮುರುಘಾ ಶ್ರೀಗಳ ವಿರುದ್ಧ ಕಿಡಿಕಾರಿದರು. ಕೆಲವು ರಾಜಕಾರಣಿಗಳು, ಕೆಲವು ಸ್ವಾಮೀಜಿಗಳನ್ನು ಮನೆಗೆ ಕರೆದು ಸೀರೆ, ಬಂಗಾರ, ಲಕ್ಷಗಟ್ಟಲೆ ಹಣ ಕೊಡುವ ಕೆಲಸ ಮಾಡುತ್ತಾರೆ. ಇದರಿಂದ ಕೆಲ ತಲೆ ಹಿಡುಕ ಸ್ವಾಮೀಜಿಗಳ ರಾಜಕೀಯ ಪ್ರವೇಶದಿಂದ ನಮ್ಮಂಥವರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ನಿನ್ನೆ (ಡಿ.24) ಸಚಿವ ಮುರುಗೇಶ್ ನಿರಾಣಿ ಮಾತನಾಡುತ್ತಾ, ‘‘ನಾನು ಹೋಗಿ ಟಿಕೆಟ್ ಕೇಳಿರಬಹುದು. ಯಾಕೆಂದರೆ ನಾನು ಅಷ್ಟು ದೊಡ್ಡ ವ್ಯಕ್ತಿಯಲ್ಲ. ನಾನು ಟಿಕೆಟ್​​ಗಾಗಿ ಸಾಕಷ್ಟು ಜನರ ಮನೆ ಬಾಗಿಲಿಗೆ ಹೋಗಿದ್ದೇನೆ. ಇವರ ಮನೆ ಬಾಗಿಲಿಗೂ ಹೋಗಿರಬಹುದು. ಇವರು (ಯತ್ನಾಳ) ಟಿಕೆಟ್​ಗಾಗಿ, ಮಂತ್ರಿ ಆಗೋದಕ್ಕಾಗಿ ಯಾರ್ಯಾರ ಮನೆ ಬಾಗಿಲಿಗೆ ಹೋಗಿದಾರೆ, ಯಾರ್ಯಾರ ಕಾಲಿಗೆ ಬಿದ್ದಿದಾರೆ ಅಂತ ಆತ್ಮಾವಲೋಕನ ಮಾಡಿಕೊಳ್ಳಬೇಕು’’ ಎಂದು ಹೇಳಿದ್ದರು.