ನ್ಯೂಸ್

ಗ್ರಾಮೀಣರಿಗೆ ಸಿಗದ ಬಾಪೂಜಿ ಸೇವೆ: ರಾಜ್ಯಾದ್ಯಂತ 6009 ಕೇಂದ್ರಗಳಿಗೆ ಪ್ರತ್ಯೇಕ ಕಂಪ್ಯೂಟರ್ ಸಿಬ್ಬಂದಿ ಇಲ್ಲ

| ವಿಲಾಸ ಮೇಲಗಿರಿ ಬೆಂಗಳೂರು

ಗ್ರಾಮೀಣ ಜನರು ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹಲವು ದಾಖಲೆಗಳನ್ನು ತ್ವರಿತ ಮತ್ತು ಸಮೀಪದಲ್ಲೇ ಪಡೆಯುವ ಸಲುವಾಗಿ ಆರಂಭಿಸಿರುವ ‘ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ’ಗಳು ಸಿಬ್ಬಂದಿ ಇಲ್ಲದೆ ಬಸವಳಿಯುತ್ತಿವೆ.

ಹಳ್ಳಿ ಜನರು ಅಗತ್ಯ ದಾಖಲೆಗಳನ್ನು ಬೇಗ ಹಾಗೂ ಹತ್ತಿರದಲ್ಲೇ ವಿವಿಧ ಇಲಾಖೆ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಪಂಚಾಯತ್ 100-ಬಾಪೂಜಿ ಸೇವಾ ಕೇಂದ್ರ’ ತೆರೆದಿದೆ. ರಾಜ್ಯದ 6009 ಪಂಚಾಯಿತಿಗಳಲ್ಲಿ ಈ ಕೇಂದ್ರಗಳಿದ್ದು, ಲಕ್ಷಾಂತರ ಜನರಿಗೆ ಸೇವೆ ಒದಗಿಸಬೇಕಿದೆ. ಆದರೆ, ಮೂಲಸೌಲಭ್ಯವಿಲ್ಲದೆ ಇವು ಸಮರ್ಪಕ ಸೇವೆ ನೀಡುತ್ತಿಲ್ಲ.

ಈ ಕೇಂದ್ರಗಳಿಗೆ ಕಂಪ್ಯೂಟರ್ ಒದಗಿಸಿದ್ದರೂ ಆಪರೇಟರ್​ಗಳ ನೇಮಕ ಮಾಡಿಲ್ಲ. ಉದ್ಯೋಗ ಸೃಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದನ್ನು ಬಿಟ್ಟರೆ ಆ ಕುರಿತ ಕಡತಕ್ಕೆ ಚಾಲನೆ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಬ್ಬ ಕಂಪ್ಯೂಟರ್ ಅಪರೇಟರ್ ಇದ್ದರೂ ಕಾರ್ಯಬಾಹುಳ್ಯದಿಂದ ಬಾಪೂಜಿ ಸೇವಾ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಈ ಕೇಂದ್ರಗಳಲ್ಲಿ ಜನರಿಗೆ ಸಿಗಬೇಕಾದ ಸೇವೆಗಳು ಸಿಗುತ್ತಿಲ್ಲ.

ಕಟ್ಟಡ ಅನುಮತಿ, ತೆರಿಗೆ ನಿರ್ಧರಣಾ ಪಟ್ಟಿ, ಜನನ-ಮರಣ ಪ್ರಮಾಣ ಪತ್ರ, ಪಹಣಿ, ವಿದ್ಯುತ್ ಬಿಲ್, ದೂರವಾಣಿ ಬಿಲ್, ಬಸ್, ರೈಲ್ವೆ, ಏರ್ ಟಿಕೆಟ್ ಬುಕ್ಕಿಂಗ್, ಮತದಾರರ ಗುರುತಿನ ಚೀಟಿ ಮಾರ್ಪಾಡು ಸೇರಿ ನೂರು ಸೇವೆಗಳನ್ನು ಒದಗಿಸುವ ಗುರಿಯೊಂದಿಗೆ ಈ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ, ನೂರು ಸೇವೆ ಕೊಡುವ ಜಾಗದಲ್ಲಿ ಬಹುತೇಕ ಕಡೆ ಕೆಲವೇ ಸೇವೆಗಳು ದೊರೆಯುತ್ತಿವೆ.

ಪ್ರಗತಿ ಪರಿಶೀಲನೆ ಇಲ್ಲ: ಬಾಪೂಜಿ ಸೇವಾ ಕೇಂದ್ರಗಳ ಮೇಲ್ವಿಚಾರಣೆ, ಪ್ರಗತಿ ಪರಿಶೀಲನೆ ಸರಿಯಾಗಿ ಆಗುತ್ತಿಲ್ಲ. ಈ ಕೇಂದ್ರಗಳ ಮೇಲ್ವಿಚಾರಣೆಗೆಂದೇ ತಾಲೂಕು ಪಂಚಾಯಿತಿ ಮಟ್ಟದಲ್ಲಿ ಸಹಾಯಕ ನಿರ್ದೇಶಕ ಪಂಚಾಯತ್ ರಾಜ್ (ಎಡಿಪಿಆರ್) ಹುದ್ದೆ ಸೃಜನೆ ಮಾಡಲಾಗಿದೆಯಾದರೂ ಮೇಲ್ವಿಚಾರಣೆ ಮಾತ್ರ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಪರೂಪ.

ಇಂಟರ್​ನೆಟ್ ವ್ಯತ್ಯಯ: ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವೆ ಒದಗಿಸಲು ಇನ್ನೊಂದು ಬಹು ದೊಡ್ಡ ಅಡ್ಡಿ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಇಂಟರ್​ನೆಟ್ ವ್ಯತ್ಯಯವಾಗುತ್ತಿರುವುದು. ಇಂಟರ್​ನೆಟ್ ಸ್ಪೀಡ್ ಸಮಸ್ಯೆಯಿಂದ ಸಿಗುವ ಸೇವೆಗಳೂ ತ್ವರಿತವಾಗಿ ಸಿಗುತ್ತಿಲ್ಲ. ನಿರಂತರವಾಗಿ ಇಂಟರ್​ನೆಟ್ ಸಂಪರ್ಕ ಕಲ್ಪಿಸಬೇಕು ಎಂಬುದು ಬಾಪೂಜಿ ಕೇಂದ್ರಗಳ ಕಂಪ್ಯೂಟರ್ ಆಪರೇಟರ್​ಗಳ ಆಗ್ರಹ.

ಮ್ಯಾನುವಲ್​ಗೆ ಮರಳಿದ ಸಿಬ್ಬಂದಿ?: ಅನೇಕ ಸೇವೆಗಳಲ್ಲಿ ಇಲಾಖೆ ಸಮನ್ವಯತೆಯ ಕೊರತೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ದಾಖಲೆಗಳನ್ನು ಕೈಬರಹ(ಮ್ಯಾನುವಲ್) ಮೂಲಕವೇ ಕೊಡಲಾಗುತ್ತಿದೆ. ಬಾಪೂಜಿ ಸೇವಾ ಕೇಂದ್ರಗಳಿಂದ ಅಪ್​ಲೋಡ್ ಆದ ಅರ್ಜಿಗಳಿಗೆ ಮೇಲಿನ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಸ್ಪಂದಿಸುತ್ತಿಲ್ಲ ಎಂಬ ದೂರುಗಳೂ ಇವೆ.

ತಂತ್ರಾಂಶ ಬಳಕೆ ಅತಂತ್ರ: ಬಾಪೂಜಿ ಸೇವಾ ಕೇಂದ್ರಗಳ ನಿರ್ವಹಣಾ ವೈಫಲ್ಯದಿಂದ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜನರ ಬಳಿಗೇ ಸೇವೆ ಕೊಡುವ ವಾಗ್ದಾನ ಮರೀಚಿಕೆಯಾಗುತ್ತಿದೆ. ತಂತ್ರಾಂಶ ಕೈಗೆಟುಕುವಂತಿದ್ದರೂ ನಿರ್ವಹಣಾ ವಿಫಲತೆಯಿಂದಾಗಿ ಕೇಂದ್ರಗಳು ಅತಂತ್ರವಾಗುತ್ತಿವೆ.

ಸಮನ್ವಯದ ಕೊರತೆ?: ಬಾಪೂಜಿ ಸೇವಾ ಕೇಂದ್ರದಲ್ಲಿ ಅಪ್​ಲೋಡ್ ಮಾಡಿ ಕೋರಲಾದ ಸೇವೆಗಳಿಗೆ ಕಂದಾಯ ಸೇರಿ ಬೇರೆ ಬೇರೆ ಇಲಾಖೆಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಒಂದಿಲ್ಲ ಒಂದು ಕಾರಣ ನೀಡಿ ಆನ್​ಲೈನ್ ಅರ್ಜಿಗಳನ್ನು ತಡೆಹಿಡಿಯಲಾಗುತ್ತದೆ. ಹಾಗಾಗಿ ಗ್ರಾಹಕರು ಹೋಬಳಿ, ತಾಲೂಕು ಕೇಂದ್ರಗಳಿಗೆ ಅಲೆದಾಡಬೇಕಿದೆ. ಕಂದಾಯ ಇಲಾಖೆಯಿಂದ ವಿತರಿಸಬೇಕಾದ ಆದಾಯ, ಜಾತಿ ಮತ್ತಿತರ ಪ್ರಮಾಣಗಳಿಗಂತೂ ಕೊಕ್ಕೆ ಹಾಕುವುದೇ ಹೆಚ್ಚು. ಹೀಗಾಗಿ ಇಲಾಖೆ ನಡುವೆ ಸಮನ್ವಯದ ಕೊರತೆ ಉಂಟಾಗಿ ಈ ಕೇಂದ್ರಗಳ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಿ ಸೇವೆ ಸುಲಲಿತವಾಗಿ ದೊರೆಯುವುದಿಲ್ಲ ಎಂಬ ಭಾವನೆ ಬೇರೂರುತ್ತಿದೆ. ಹಾಗಾಗಿ ಬಾಪೂಜಿ ಕೇಂದ್ರಗಳನ್ನು ಜನ ನೆಚ್ಚಿಕೊಳ್ಳುತ್ತಿಲ್ಲ.

10 ರೂ. ಸೇವೆಗೆ 100 ರೂ. ಖರ್ಚು!: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವೆಗಳು ಸಮರ್ಪಕವಾಗಿ ದೊರೆಯದೇ ಇರುವುದರಿಂದ 10 ರೂ.ಗೆ ಸಿಗುವ ಸೇವೆಗೆ 100 ರೂ. ಹಾಗೂ ಸಮಯ ವ್ಯರ್ಥ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇದು ಗೊತ್ತಿದ್ದೂ ಪಿಡಿಒಗಳು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.