ನವದೆಹಲಿ: ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮಾಧ್ಯಮದಲ್ಲಿ ಪಾವತಿಗೆ ಬ್ಯಾಂಕುಗಳು ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿ ( ಸಿಬಿಡಿಟಿ- ಸೆಂಟ್ರಲ್ ಬೋರ್ಡ್ ಫಾರ್ ಡೈರೆಕ್ಟ್ ಟ್ಯಾಕ್ಸ್ ) ಸ್ಪಷ್ಟಪಡಿಸಿದೆ.
ಪೇಮೆಂಟ್ ಆ್ಯಂಡ್ ಸೆಟಲ್ಮೆಂಟ್ ಸಿಸ್ಟಮ್ಸ್ ಆ್ಯಕ್ಟ್ 2007ರ ಅನ್ವಯ 2020ರ ಜನವರಿ 1ರ ನಂತರ ಡಿಜಿಟಲ್ ಪಾವತಿಗಳ ಮೇಲೆ ಯಾವುದೇ ಶುಲ್ಕ ವಿಧಿಸಲು ಅವಕಾಶವಿಲ್ಲ ಎಂದು ಸಿಬಿಡಿಟಿ ಹೇಳಿದೆ.
ಡಿಜಿಟಲ್ ಪಾವತಿಗಳಾದ ರೂಪೇ ಆಧಾರಿತ ಡೆಬಿಟ್ ಕಾರ್ಡ್, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ), ಕ್ಯೂಆರ್ ಕೋಡ್, ಭೀಮ್ ಯುಪಿಐ, ಕ್ಯೂಆರ್ ಕೋಡ್ ಮೊದಲಾದವುಗಳ ಮೂಲಕ ಮಾಡಲಾದ ಯಾವುದೇ ಪಾವತಿ ಅಥವಾ ಗ್ರಾಹಕರು ಪಡೆದ ಹಣದ ಮೇಲೆ ಶುಲ್ಕ ಪಡೆಯುವಂತಿಲ್ಲ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಆದರೆ, ಕೆಲ ಬ್ಯಾಂಕುಗಳು ಅಥವಾ ಸರ್ವೀಸ್ ಪ್ರೊವೈಡರ್ಗಳು ಕೆಲ ಮಟ್ಟಿಗಿನ ವಹಿವಾಟಿನ ಮೇಲಷ್ಟೇ ವಿನಾಯ್ತಿ ನೀಡಿ ನಂತರ ಶುಲ್ಕ ವಿಧಿಸುತ್ತಿವೆ. ಇದು ಕೂಡ ಆದಾಯ ತೆರಿಗೆ ಕಾಯ್ದೆ ಅನ್ವಯವೂ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸಿಬಿಡಿಟಿ ಹೇಳಿದೆ.
ಈ ಕಾರಣಕ್ಕಾಗಿ ಜನವರಿ ನಂತರ ಇಂಥ ವಹಿವಾಟುಗಳ ಮೇಲೆ ಶುಲ್ಕ ವಿಧಿಸಿದ್ದೇ ಆದಲ್ಲಿ ಅದನ್ನು ಮರಳಿಸುವ ಸಲಹೆ ನೀಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಜುಲೈನಲ್ಲಿ 1.49 ಶತಕೋಟಿ ವಹಿವಾಟುಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ನಡೆಸಲಾಗಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ ಮಾಹಿತಿ ಬಿಡುಗಡೆ ಮಾಡಿದೆ. ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಡಿಜಿಟಲ್ ಪಾವತಿ ವಿಧಾನ ಅನಿವಾರ್ಯವೂ ಆಗಿದೆ.