ನ್ಯೂಸ್

ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ: ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಜನರ ಆಕ್ರೊಶ ಮುಗಿಲು ಮುಟ್ಟಿದೆ. ಸರ್ಕಾರಿ ಉದ್ಯೋಗ ಮೀಸಲಾತಿ ನೀತಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಈಗಾಗಲೇ 300ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಾಂಗ್ಲಾ ಪ್ರಧಾನಿ ಶೇಖ್​ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿದ್ದಾರೆ. ಇದರ ನಡುವೆ ನೂರಾರು ಪ್ರತಿಭಟನಾಕಾರರು ಶೇಖ್​ ಹಸೀನಾ ಅವರ ಅಧಿಕೃತ ನಿವಾಸವನ್ನು ಪ್ರವೇಶಿ, ಸಿಕ್ಕ ಸಿಕ್ಕ ವಸ್ತುಗಳನ್ನು ದೋಚುತ್ತಿದ್ದಾರೆ.

ಸೇನಾ ಹೆಲಿಕಾಪ್ಟರ್​ ಮೂಲಕ ಬಾಂಗ್ಲಾ ತೊರೆದಿರುವ ಶೇಖ್​ ಹಸೀನಾ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ಅದರಲ್ಲೂ ತನ್ನ ಸುರಕ್ಷಿತ ದೃಷ್ಟಿಯಿಂದ ಭಾರತದ ಆಡಳಿತ ಕೇಂದ್ರ ದೆಹಲಿಗೆ ಬರಲಿದ್ದಾರೆ ಎಂದು ಅನೇಕ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಎಲ್ಲ ರಾಜಕೀಯ ಬೆಳವಣಿಗೆ ನಡುವೆ ರಾಜಧಾನಿ ಢಾಕಾದಲ್ಲಿರುವ ಶೇಖ್​ ಹಸೀನಾ ಅಧಿಕೃತ ನಿವಾಸಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾವಿರಾರು ಮಂದಿ ಸರ್ಕಾರಿ ನಿವಾಸದ ಮುಂದೆ ಜಮಾಯಿಸಿದ್ದಾರೆ. ಅಲ್ಲದೆ, ಕೆಲವರು ಮನೆಯ ಒಳಗಡೆ ಪ್ರವೇಶಿಸಿದ್ದು, ಸಿಕ್ಕ ಸಿಕ್ಕ ವಸ್ತುಗಳನ್ನು ದೋಚುತ್ತಿದ್ದಾರೆ. ಅಲ್ಲದೆ, ಹಾಸಿಗೆ ಮೇಲೆ ಬಿದ್ದು ಒದ್ದಾಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.

ಸರ್ಕಾರಿ ಉದ್ಯೋಗಕ್ಕೆ ಮೀಸಲಾತಿ ವ್ಯವಸ್ಥೆಯನ್ನು ರದ್ದು ಮಾಡುವಂತೆ ಕೋರಿ ಕಳೆದ ಜೂನ್​ ತಿಂಗಳಿಂದಲೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಪೊಲೀಸರು ಮತ್ತು ಢಾಕಾ ವಿಶ್ವವಿದ್ಯಾಲಯದ ಸರ್ಕಾರ ಪರ ಕಾರ್ಯಕರ್ತರು ಹಾಗೂ ಪ್ರತಿಭಟನಾಕಾರರ ನಡುವಿನ ಘರ್ಷಣೆಯ ನಂತರ ಈ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ.

ಕರ್ಫ್ಯೂ ಮತ್ತು ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವಿಕೆ ಸೇರಿದಂತೆ ಅನೇಕ ಬಲ ಪ್ರಯೋಗ ಮಾಡಿ ಪ್ರತಿಭಟನೆಯನ್ನು ತಡೆಯಲು ಬಾಂಗ್ಲಾ ಸರ್ಕಾರ ಪ್ರಯತ್ನಿಸಿತು. ಆದರೆ, ಜನರ ಪ್ರತಿಭಟನೆ ಹತ್ತಿಕಲು ಮಾತ್ರ ಸಾಧ್ಯವಾಗಲಿಲ್ಲ. ಈ ಹಿಂಸೆಯಲ್ಲಿ 300ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ನೂರಾರು ಮಂದಿ ಗಾಯಗೊಂಡಿದ್ದಾರೆ. ಕೊನೆಗೂ ಪ್ರತಿಭಟನೆಗೆ ಹೆದರಿದ ಶೇಖ್​ ಹಸೀನಾ, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)