ನ್ಯೂಸ್

ಬಳ್ಳಾರಿಯಲ್ಲಿ ಬಾಣಂತಿ ಸಾವು ಪ್ರಕರಣ; ಇದು ಕೊಲೆಗಡುಕ ಸರ್ಕಾರ ಎಂದ R. Ashoka

ಬೆಂಗಳೂರು: ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ ಬಳ್ಳಾರಿಯಲ್ಲಿ ಕಳಪೆ ಔಷಧಿಯಿಂದ ಮತ್ತೊಬ್ಬ ಬಾಣಂತಿ, ಮಗುವಿನ ಸಾವಾಗಿದೆ. ನಿಮಗೆ ಮಾನವೀಯತೆ ಇದೆಯಾ? ನಿಮಗೆ ಮನುಷ್ಯತ್ವ ಇದೆಯಾ? ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ (R. Ashoka) ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಕುರಿತು ಶುಕ್ರವಾರ(ಡಿ.06) ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬಳ್ಳಾರಿಯಲ್ಲಿ ಕಳಪೆ ಔಷಧಿಯಿಂದ ಮತ್ತೊಬ್ಬ ಬಾಣಂತಿ, ಮಗುವಿನ ಸಾವಾಗಿದೆ. ನೀವು ಮಾಡಿದ ಕಾಟಾಚಾರದ ಸಭೆಗಳಿಂದ ಯಾವ ಪ್ರಯೋಜನವೂ ಆಗಿಲ್ಲ. ಇಷ್ಟಾದರೂ ತಾವಾಗಲಿ, ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರಾಗಲಿ ಬಳ್ಳಾರಿಗೆ ಭೇಟಿ ನೀಡಿಲ್ಲ. ನಿಮ್ಮನ್ನ ಕೊಲೆಗಡುಕ ಸರ್ಕಾರ ಅನ್ನದೆ ಇನ್ನೇನು ಅನ್ನಬೇಕು? ಎಂದು ಪ್ರಶ್ನಿಸಿದ್ದಾರೆ.

ಬಡ ಕುಟುಂಬದ ಮಹಿಳೆಯರಿಗೆ, ಮಕ್ಕಳಿಗೆ ಮೊದಲು ಜೀವದ ಗ್ಯಾರಂಟಿ ಕೊಡಿ. ಬದುಕುವ ಭಾಗ್ಯ ಕೊಡಿ. ತಾವು ಬಳ್ಳಾರಿಗೆ ಭೇಟಿ ಕೊಡಲು ಇನ್ನು ಎಷ್ಟು ಮಹಿಳೆಯರು, ಹಸುಗೂಸುಗಳ ಹೆಣ ಬೀಳಬೇಕು? ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಕಿಡಿಕಾರಿದ್ದಾರೆ.

ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ವಿಜಯೇಂದ್ರ

ಬಳ್ಳಾರಿ ಬಾಣಂತಿಯರ ಸಾವು ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದ್ದು ತೋರುತ್ತಿದೆ. ಘಟನಾ ಸ್ಥಳಕ್ಕೆ ಇದುವರೆಗೂ ಆರೋಗ್ಯ ಸಚಿವರಾಗಲಿ, ವೈದ್ಯಕೀಯ ಶಿಕ್ಷಣ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಭೇಟಿ ನೀಡದಿರುವುದು ಖಂಡನೀಯ. ಬ್ಲಾಕ್ ಲಿಸ್ಟ್ ಪಟ್ಟಿಯಲ್ಲಿರುವ ಕಂಪನಿಯಿಂದ ಔಷಧಗಳನ್ನು ತರಿಸಿಕೊಳ್ಳುತ್ತಿದ್ದು, ಸರ್ಕಾರ ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು, ಅಲ್ಲದೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯಯೇಂದ್ರ ಆಗ್ರಹಿಸಿದ್ದಾರೆ.