ನ್ಯೂಸ್

ಹಿಂದೂ ದೇವಸ್ಥಾನದ ಮುಂದೆ ಬೆತ್ತಲೆ ಕುಳಿತು ಧ್ಯಾನ: ವಿದೇಶಿ ಪ್ರವಾಸಿಗನ ವಿರುದ್ಧ ಜನಾಕ್ರೋಶ

ಡೆನ್ಪಾಸರ್: ಬಾಲಿಯಲ್ಲಿ ಪವಿತ್ರ ಹಿಂದು ದೇವಸ್ಥಾನದ ಮುಂದೆ ಬೆತ್ತಲೆಯಾಗಿ ಕುಳಿತು ಧ್ಯಾನ ಮಾಡುವ ಮೂಲಕ ವಿದೇಶಿ ಪ್ರವಾಸಿಗನೊಬ್ಬ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದು, ಆತನ ಬಂಧನಕ್ಕಾಗಿ ಸ್ಥಳೀಯ ಅಧಿಕಾರಿಗಳು ಬಲೆ ಬೀಸಿದ್ದಾರೆ.

ದೇವಸ್ಥಾನದ ಮುಂದೆ ಬೆತ್ತಲೆಯಾಗಿ, ಮಂಡಿ ಮಡಚಿ ಕುಳಿತು ಧ್ಯಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಬಾಲಿಯ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ನಿ ಲುಹ್​ ಜೆಕಂತಿಕ್​ ಎಂಬಾಕೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿ ಪ್ರವಾಸಿಗನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬಾಲಿಯ ಜನರು ಸಾಕಷ್ಟು ಅವಮಾನವನ್ನು ಸಹಿಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಪ್ರವಾಸಿಗನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಲಸೆ ಅಧಿಕಾರಿಗಳ ಬಳಿ ಲುಹ್​ ಜೆಕಂತಿಕ್​ ಅವರು ಮನವಿ ಮಾಡಿದ್ದಾರೆ.

ವಿದೇಶಿ ಪ್ರವಾಸಿಗ ಯಾರು ಎಂಬುದನ್ನು ಈಗಾಗಲೇ ಅಧಿಕಾರಿಗಳು ಗುರುತಿಸಿದ್ದು, ಸಾರ್ವಜನಿಕವಾಗಿ ಆತನ ಹೆಸರು ಮತ್ತು ರಾಷ್ಟ್ರಿಯತೆಯನ್ನು ಬಹಿರಂಗಪಡಿಸುವುದು ಬಾಕಿ ಇದೆ. ಈ ಘಟನೆ ಮಾತ್ರ ಸ್ಥಳೀಯವಾಗಿ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಇಂತಹ ಘಟನಗಳನ್ನು ಸಹಿಸಲು ಸಾಧ್ಯವಿಲ್ಲ, ಪ್ರವಾಸಿಗನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಸ್ತುತ ಪ್ರವಾಸಿಗನ ವಿರುದ್ಧ ತನಿಖೆ ಆರಂಭಿಸಿರುವುದಾಗಿ ವಲಸೆ ಅಧಿಕಾರಿ ಟೆಡಿ ರಿಯಾಂದಿ ಅವರು ಖಚಿತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಪ್ರವಾಸಿಗನನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ. ಆದರೆ, ಅದಿನ್ನು ಯಶಸ್ವಿಯಾಗಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇನ್ನೂ ಇಂತಹ ಘಟನೆಗಳು ಇದೇ ಮೊದಲೇನಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಅನುಚಿತ ವರ್ತನೆ ಹೆಚ್ಚಾಗಿರುವ ಕಾರಣದಿಂದ ವಿದೇಶಿ ಪ್ರವಾಸಿಗರನ್ನು ಗಡಿಪಾರು ಮಾಡಲಾಗುತ್ತಿದೆ ಮತ್ತು ಇಂಡೋನೇಷ್ಯಾ ಪ್ರವೇಶವನ್ನು ನಿಷೇಧಿಸಲಾಗಿದೆ.

2023ರ ಏಪ್ರಿಲ್​ನಲ್ಲಿ ಪವಿತ್ರ ಮರದ ಮುಂದೆ ನಿಂತು ಬೆತ್ತಲೆ ಫೋಟೋ ತಗೆದಿದ್ದಕ್ಕೆ ರಷ್ಯಾದ ಇನ್​ಸ್ಟಾಗ್ರಾಂ ಇನ್ಫ್ಲುಯೆನ್ಸರ್​ ಒಬ್ಬಳನ್ನು ಬಾಲಿಯಿಂದಲೇ ಬಹಿಷ್ಕರಿಸಲಾಯಿತು. ಅದೇ ರೀತಿ, ಜೂನ್‌ನಲ್ಲಿ ಡೆನ್ಮಾರ್ಕ್​ ಮೂಲದ ಮಹಿಳೆಯೊಬ್ಬರು ಬೈಕ್​ ಚಲಾಯಿಸುತ್ತಾ ಅಶ್ಲೀಲತೆ ಪ್ರದರ್ಶನ ಮಾಡಿದ್ದು ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ ಆಕೆಯನ್ನು ಗಡಿಪಾರು ಮಾಡಲಾಯಿತು. ಈ ಘಟನೆಗಳು ಬಾಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮಾರ್ಗಸೂಚಿಯನ್ನು ಪ್ರಕಟಿಸಲು ಸ್ಥಳೀಯ ಸರ್ಕಾರವನ್ನು ಪ್ರೇರೇಪಿಸಿದೆ. (ಏಜೆನ್ಸೀಸ್​)