ಮಂಡ್ಯ: ಕಾವೇರಿಗೆ ಬಾಗಿನ ಅರ್ಪಿಸುವ ವಿಚಾರವಾಗಿ ಇದೀಗ ವಿಶೇಷವಾದ ಬೇಡಿಕೆಯೊಂದು ಕೇಳಿ ಬಂದಿದೆ. ಕಾವೇರಿಗೆ ರಾಜಕಾರಣಿಗಳು ಬಾಗಿನ ಅರ್ಪಿಸಬಾರದು, ಬದಲಿಗೆ ಒಡೆಯರ್ ಮನೆತನದವರೇ ಪೂಜೆ ಸಲ್ಲಿಸಲಿ ಎಂಬುದಾಗಿ ರೈತರೇ ಮನವಿ ಮಾಡಿಕೊಂಡಿದ್ದಾರೆ.
ಇಂದು ಮಂಡ್ಯದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿಯಾದ ರೈತ ಮುಖಂಡರು ಇಂಥದ್ದೊಂದು ಮನವಿಯನ್ನು ಮಾಡಿಕೊಂಡರು. ಕೆಲವು ಪಾಪಿಷ್ಠ-ಪುಡಾರಿಗಳ ಪೂಜೆಯಿಂದಾಗಿ ಕಟ್ಟೆ ಬರಿದಾಗಿದೆ. ಹೀಗಾಗಿ ರಾಜಕಾರಣಿಗಳು ಕಾವೇರಿಗೆ ಬಾಗಿನ ಅರ್ಪಿಸುವುದು ಬೇಡ ಎಂದು ಅವರು ಕೋರಿಕೊಂಡರು.
ಕೆಲವರು ಮಹಾರಾಜರು ಕೊಟ್ಟ ಕೊಡುಗೆಗೆ ಗೋಮುಖ ವ್ಯಾಘ್ರರಾಗಿ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಮಹಾರಾಜರು ಕಟ್ಟಿದಂಥ ಕಟ್ಟೆಗೆ ಕಳಂಕ ತರುತ್ತಿದ್ದಾರೆ. ಯಾವ ರಾಜಕಾರಣಿಯೂ ಮನೆ ಮಾರಿ ಕನ್ನಂಬಾಡಿ ಕಟ್ಟೆ ಕಟ್ಟಿಲ್ಲ, ಇದು ರಾಜ್ಯದ ಜನರಿಗಾಗಿ ಮಹಾರಾಜರು ಕಟ್ಟಿದಂಥ ಕಟ್ಟೆ. ಇದಕ್ಕೆ ನೀವೇ ಬಾಗಿನ ಅರ್ಪಿಸಬೇಕು. ಪ್ರತಿವರ್ಷ ನೀವೇ ಕಾವೇರಮ್ಮಗೆ ಬಾಗಿನ ಅರ್ಪಿಸಬೇಕು. ಈಗಲೂ ದಂಪತಿಸಮೇತ ಕಾವೇರಿ ಮಾತೆಗೆ ಪೂಜೆ ಮಾಡಿ ಕಟ್ಟೆ ತುಂಬುತ್ತದೆ ಎಂದು ರೈತ ಮುಖಂಡರು ಮನವಿ ಮಾಡಿಕೊಂಡರು.