ನ್ಯೂಸ್

ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಡಿ.29ಕ್ಕೆ ಬೆಂಗಳೂರಿನಲ್ಲಿ ಆಟೋ ಚಾಲಕರಿಂದ ಮುಷ್ಕರ

ಬೆಂಗಳೂರು: ಆಟೋ ಚಾಲಕರು ಡಿ.29ರಂದು ಬೆಂಗಳೂರಿನಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಸಾರಿಗೆ ಇಲಾಖೆ ವಿರುದ್ಧ ಆಟೋ ಚಾಲಕರು ಮುಷ್ಕರಕ್ಕೆ ಹೂಡಲು ತೀರ್ಮಾನಿಸಿದ್ದಾರೆ. ಈ ಮೂಲಕ ಆ್ಯಪ್ ಆಧಾರಿತ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಹಾಗೂ ಬೌನ್ಸ್​ ಬೈಕ್​ಗೆ ನೀಡಿರುವ ಅನುಮತಿಯನ್ನು ಮರಳಿ ಪಡೆಯುವಂತೆ ಆಟೋ ಚಾಲಕರು ಒತ್ತಾಯಿಸಿದ್ದಾರೆ. ಮುಷ್ಕರಕ್ಕೆ ಈಗಾಗಲೇ 21 ಆಟೋ ಸಂಘಟನೆಗಳು ಸಾಥ್ ನೀಡಿವೆ.

ಮುಷ್ಕರದಂತೆ ಡಿ. 29ರಂದು ಬೆಂಗಳೂರಿನಾದ್ಯಂತ ಆಟೋ ಸಂಚಾರವನ್ನು ಸ್ಥಗಿತಗೊಳಿಸಲು ಆಟೋ ಚಾಲಕರು ತೀರ್ಮಾನಿಸಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಮುಷ್ಕರದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್​ನಿಂದ ಬೃಹತ್ ಆಟೋ ರ‍್ಯಾಲಿ ಮೂಲಕ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು ತೀರ್ಮಾನಿಸಿದ್ದಾರೆ.

ಬೆಂಗಳೂರಿನಲ್ಲಿ ಅನುಮತಿ ಇಲ್ಲದೇ ಹೋದರೂ ರ‍್ಯಾಪಿಡೋ, ಬೌನ್ಸ್​ ಬೈಕ್​ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಆಟೋ ಚಾಲಕರ ಆದಾಯಕ್ಕೆ ಪೆಟ್ಟು ಬೀಳುತ್ತಿದೆ. ಬೈಕ್ ಟ್ಯಾಕ್ಸಿ ಆ್ಯಪ್ ನಿಷೇಧಿಸಬೇಕು. ಬೌನ್ಸ್ ಎಲೆಕ್ಟ್ರಿಕ್ ಬೈಕ್​ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಆಟೋ ಚಾಲಕರು ಒತ್ತಾಯಿಸಿದ್ದಾರೆ. ಆರ್​ಟಿಒ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸುವಲ್ಲಿ ಎಡವಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.