ನ್ಯೂಸ್

ಚೀನಾ ಮೇಲೆ ಕಣ್ಣು; ಭಾರತ, ಅಮೆರಿಕ ಮತ್ತು ಜಪಾನ್​ ಜತೆ ಆಸ್ಟ್ರೇಲಿಯಾದ ನೌಕಾ ಸಮರಾಭ್ಯಾಸ

ನವದೆಹಲಿ: ಜಾಗತಿಕವಾಗಿ ಚೀನಾ ವಿರೋಧಿ ರಾಷ್ಟ್ರಗಳು ಒಂದಾಗಬೇಕು ಎಂದು ಅಮೆರಿಕದ ಸಂಸತ್​ ಸದಸ್ಯ ಜಾನ್​ ಕೆನಡಿ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ, ಅಮೆರಿಕ ಮತ್ತು ಜಪಾನ್​ ಜತೆ ನೌಕಾ ಸಮರಭ್ಯಾಸ ನಡೆಸಲು ಆಸ್ಟ್ರೇಲಿಯಾ ಮುಂದಾಗಿದೆ.

ಮಲಬಾರ್​ ನೌಕಾ ಸಮರಭ್ಯಾಸ ಎಂಬ ಹೆಸರಿನ ಈ ಸಮರಭ್ಯಾಸ ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಸಾಮಾನ್ಯವಾಗಿ ಭಾರತ, ಅಮೆರಿಕ ಮತ್ತು ಜಪಾನ್​ನ ನೌಕಾಪಡೆಗಳು ಮಾತ್ರವೇ ಈ ಸಮರಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ, ಈ ಬಾರಿ ಆಸ್ಟ್ರೇಲಿಯಾವನ್ನು ಸೇರಿಸಿಕೊಳ್ಳಲು ಚಿಂತನೆ ನಡೆದಿದೆ.

ಒಂದು ವೇಳೆ ಆಸ್ಟ್ರೇಲಿಯಾವನ್ನು ಈ ಸಮರಭ್ಯಾಸಕ್ಕೆ ಸೇರಿಸಿಕೊಳ್ಳಲು ಭಾರತ ನಿರ್ಧರಿಸಿದರೆ, ಇಂಡೋ-ಪೆಸಿಫಿಕ್​ ಮಹಾಸಾಗರದ ವ್ಯಾಪ್ತಿಯಲ್ಲಿ ಚತುಷ್ಕೋನ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬಂದಂತೆ ಆಗಲಿದೆ. ತನ್ಮೂಲಕ ಈ ಪ್ರದೇಶದಲ್ಲಿ ತನ್ನ ಸೇನಾಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾಕ್ಕೆ ಸೆಡ್ಡು ಹೊಡೆಯಲು ಅನುಕೂಲವಾಗುತ್ತದೆ ಎನ್ನಲಾಗಿದೆ.

2017ರಲ್ಲೇ ಓಂಕಾರ: ಇಂಡೋ-ಪೆಸಿಫಿಕ್​ ಸಮುದ್ರ ಮಾರ್ಗ ಯಾವುದೇ ಒಂದು ರಾಷ್ಟ್ರದ ಏಕಚಕ್ರಾದಿಪತ್ಯಕ್ಕೆ ಒಳಗಾಗದಂತೆ ಹಾಗೂ ಇಂಥ ಮನೋಭಾವ ಹೊಂದಿರುವ ಚೀನಾವನ್ನು ಕಟ್ಟಿಹಾಕುವ ಉದ್ದೇಶದಿಂದ ಭಾರತ, ಅಮೆರಿಕ, ಜಪಾನ್​ ಮತ್ತು ಆಸ್ಟ್ರೇಲಿಯಾ 2017ರ ನವೆಂಬರ್​ನಲ್ಲೇ ಚತುಷ್ಕೋನ ಮೈತ್ರಿಕೂಟ ರಚಿಸಿಕೊಂಡಿದ್ದವು. ಆದರೆ ಮಲಬಾರ್​ ನೌಕಾ ಸಮರಭ್ಯಾಸದಲ್ಲಿ ಮಾತ್ರ ಆಸ್ಟ್ರೇಲಿಯಾವನ್ನು ಸೇರಿಸಿಕೊಂಡಿರಲಿಲ್ಲ. ಇದೀಗ ಇಲ್ಲಿಯೂ ಕೂಡ ಆಸ್ಟ್ರೇಲಿಯಾವನ್ನು ಸೇರಿಸಿಕೊಂಡು, ಚತುಷ್ಕೋನ ಮೈತ್ರಿಕೂಟವನ್ನು ಅನ್ವರ್ಥಕಗೊಳಿಸಲು ಭಾರತ ಚಿಂತನೆ ನಡೆಸಿದೆ.