ನ್ಯೂಸ್

ಚಂದ್ರಯಾನ ಲ್ಯಾಂಡಿಂಗ್​ ದಿನಾಂಕದಲ್ಲಿ ಆಗಲಿದೆಯಾ ಬದಲಾವಣೆ?; ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್..

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಚಂದ್ರಯಾನ-3 ನಾಡಿದ್ದು ಅಂದರೆ ಆ. 23ರ ಸಂಜೆ 6.04ಕ್ಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ ಎಂದು ಈಗಾಗಲೇ ಘೋಷಣೆ ಆಗಿದೆ. ಅದಾಗ್ಯೂ ಈ ಲ್ಯಾಂಡಿಂಗ್​ನಲ್ಲಿ ಬದಲಾವಣೆ ಆಗುವ ಸಾಧ್ಯತೆಯೂ ಈಗ ಬಹಿರಂಗಗೊಂಡಿದೆ.

ಇಂಥದ್ದೊಂದು ಸಂಗತಿ ಇಸ್ರೋದಿಂದಲೇ ಹೊರಬಿದ್ದಿದೆ. ಅರ್ಥಾತ್, ಇಸ್ರೋದ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್​ನ ನಿರ್ದೇಶಕ ನಿಲೇಶ್ ಎಂ. ದೇಸಾಯಿ ಈ ಕುರಿತು ಮಾಹಿತಿ ನೀಡಿದ್ದಾರೆ. ಇಂದು ಮಾಧ್ಯಮದವರ ಜತೆ ಪ್ರತಿಕ್ರಿಯೆ ನೀಡಿದ ಅವರು, ಚಂದ್ರಯಾನ ಲ್ಯಾಂಡಿಂಗ್​ನಲ್ಲಿ ಬದಲಾವಣೆ ಆಗಬಹುದಾದ ಸಾಧ್ಯತೆ ಇರುವುದನ್ನೂ ಹೇಳಿಕೊಂಡರು.

ಆ ಪ್ರಕಾರ ಚಂದ್ರಯಾನ ಲ್ಯಾಂಡಿಂಗ್ ಆ. 23ರಂದು ಆಗದಿದ್ದರೆ ಆ. 27ರಂದು ಆಗಲಿದೆ ಎಂಬ ವಿಷಯ ಬಹಿರಂಗಗೊಂಡಿದೆ. 'ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಲ್ಯಾಂಡರ್ ಮಾಡ್ಯೂಲ್‌ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಅದನ್ನು ಇಳಿಸುವುದು ಸೂಕ್ತವೇ ಅಥವಾ ಬೇಡವೇ ಎಂಬುದರ ಕುರಿತು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ವೇಳೆ, ಯಾವುದೇ ಅಂಶವು ಅನುಕೂಲಕರವಾಗಿಲ್ಲ ಎಂದು ತೋರಿದರೆ, ನಾವು ಆ. 27ರಂದು ಚಂದ್ರನ ಮೇಲೆ ಮಾಡ್ಯೂಲ್ ಇಳಿಸುತ್ತೇವೆ' ಎಂದು ಅವರು ಹೇಳಿದ್ದಾರೆ.

ಚಂದ್ರಯಾನ 3 ಜುಲೈ 14ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಇಸ್ರೋದ ಸತೀಶ್ ಧವನ್ ಸ್ಪೇಸ್ ಸೆಂಟರ್​ನಿಂದ ಉಡಾವಣೆಗೊಂಡಿತ್ತು. ಆ. 23ರಂದು ಚಂದ್ರಯಾನ ಲ್ಯಾಂಡ್ ಆಗುವ ಕುರಿತು ಘೋಷಣೆ ಮಾಡಲಾಗಿತ್ತು. ಆದರೆ ಲೇಟೆಸ್ಟ್​ ಅಪ್​ಡೇಟ್ ಪ್ರಕಾರ ಅದು ಆ. 27ರಂದು ನಡೆದರೂ ಅಚ್ಚರಿ ಏನಿಲ್ಲ ಎಂಬಂತಾಗಿದೆ.