ನ್ಯೂಸ್

ರಾಣೆಬೆನ್ನೂರು | ರೀಲ್ಸ್ ಮಾಡೋಣ ಎಂದು ಯುವಕನ ಕಣ್ಣಿಗೆ ಬಟ್ಟೆ ಕಟ್ಟಿದಳು; ಸರ್​ಪ್ರೈಸ್ ಎನ್ನುತ್ತಲೇ ಕತ್ತು ಕೊಯ್ದಳು!

ರಾಣೆಬೆನ್ನೂರು: ನಿನಗೊಂದು ಸರ್​ಪ್ರೈಸ್ ಇದೆ. ಕೈ ಕಟ್ಟಿ ಕಣ್ಣು ಮುಚ್ಚಿಕೊ ಎಂದು ಅಪ್ರಾಪ್ತ ವಯಸ್ಸಿನ ಹುಡುಗಿ ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನನ್ನು ಸಿನಿಮಯ ರೀತಿಯಲ್ಲಿ ಕುತ್ತಿಗೆ ಕೊಯ್ದು ಕೊಲೆ ಮಾಡಲು ಯತ್ನಿಸಿದ ಘಟನೆ ನಗರದ ಹೊರವಲಯದ ಸ್ವರ್ಣ ಪಾರ್ಕ್​​ನಲ್ಲಿ ಶುಕ್ರವಾರ ನಡೆದಿದೆ. ಹರಪನಹಳ್ಳಿ ತಾಲೂಕಿನ ಮೈದೂರ ಗ್ರಾಮದ ದೇವೇಂದ್ರಗೌಡ ಕಾಡನಗೌಡ ಮಂಡಗತ್ತಿ (27) ಹಲ್ಲೆಗೊಳಗಾದ ಯುವಕ.

ಈತನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ತಾಲೂಕಿನ ಗುಡಿಹೊನ್ನತ್ತಿ ಗ್ರಾಮದ ಅಪ್ರಾಪ್ತ ವಯಸ್ಸಿನ ಹುಡುಗಿ ಕೊಲೆಗೆ ಯತ್ನಿಸಿದ ಆರೋಪಿ. ಏ.6ರಂದು ಆಕೆಯ ಜನ್ಮದಿನವಿತ್ತು. ಆದ್ದರಿಂದ ದೇವೇಂದ್ರಗೌಡ ಆಕೆಯನ್ನು ಭೇಟಿಯಾಗಲು ರಾಣೆಬೆನ್ನೂರಿಗೆ ಬಂದಿದ್ದ. ಆಕೆಗೆ ಉಡುಗೊರೆ ಕೊಡಿಸಿ ವಾಪಸ್ ಮನೆಗೆ ಹೋಗಬೇಕು ಎಂದುಕೊಂಡಿದ್ದ. ಆತನನ್ನು ನಿನಗೆ ಒಂದು ವಿಶೇಷ ಸ್ಥಳಕ್ಕೆ ಕರೆದುಕೊಂಡು ಹೋಗುವೆ ಬಾ ಎಂದು ಆಟೋ ರಿಕ್ಷಾದಲ್ಲಿ ನಗರದ ಹೊರವಲಯದ ನಿರ್ಜನ ಪ್ರದೇಶವಾದ ಸ್ವರ್ಣ ಪಾರ್ಕ್​ಗೆ ಕರೆದುಕೊಂಡು ಹೋಗಿದ್ದಳು.

ಅಲ್ಲಿ ನಿನಗೊಂದು ಸರ್ಫ್ರೆಸ್ ಇದೆ. ಜತೆಗೆ ರೀಲ್ಸ್ ಕೂಡ ಮಾಡಬೇಕು. ನಿನ್ನ ಕೈ ಹಾಗೂ ಕಣ್ಣು ಕಟ್ಟುವೆ ಎಂದು ವೇಲ್‌ನಿಂದ ಆತನ ಕೈ ಹಾಗೂ ಕಣ್ಣು ಕಟ್ಟಿದ್ದಾಳೆ. ಆತ ಏನು ಸಫ್ರೈಸ್ ಎಂದು ಹೇಳುತ್ತಿದ್ದಂತೆ ಚಾಕುವಿನಿಂದ ಆತನ ಕುತ್ತಿಗೆ ಕೊಯ್ದಿದ್ದಾಳೆ. ಆತ ಕೂಡಲೇ ಆಕೆಯನ್ನು ಒದ್ದಿದ್ದಾನೆ.

ಆಗ ಮತ್ತೆ ಎದ್ದು ಬಂದ ಅಪ್ರಾಪ್ತ ವಯಸ್ಸಿನ ಹುಡುಗಿ ನನ್ನ ಜತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತೀಯಾ ನೀನು. ನನಗೆ ಬೇರೆ ಲವರ್ ಇದ್ದಾನೆ. ನೀನ್ಯಾರು ಮಾಡಿಕೊಳ್ಳಲು ಎನ್ನುತ್ತ ಮತ್ತೆ ಎರಡೂ ಬಾರಿ ಚಾಕೂವಿನಿಂದ ಇರಿದಿದ್ದಾಳೆ. ಅಷ್ಟರಲ್ಲಿ ಆತ ಕೈ ಕಟ್ಟಿದ್ದನ್ನು ಬಿಡಿಸಿಕೊಂಡು ಆಕೆಯನ್ನು ಹಿಡಿದುಕೊಂಡಿದ್ದಾನೆ. ಅಯ್ಯೋ ನೀರು ತರುತ್ತೇನೆ ತಡಿ ಎಂದು ಆತನಿಂದ ಬಿಡಿಸಿಕೊಂಡ ಅಪ್ರಾಪ್ತ ವಯಸ್ಸಿನ ಹುಡುಗಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

ಯುವಕನ ಕೂಗಾಟ ಕೇಳಿದ ದಾರಿಹೋಕರು ಕೂಡಲೇ ಆತನನ್ನು ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆತ ನೀಡಿದ ದೂರಿನ ಮೇಲೆ ಪೊಲೀಸರು ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ದಾಖಲಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀಪ್ಲಾನ್ ಮಾಡಿದ್ದ ಚಾಲಾಕಿ...

ಕುಟುಂಬದವರ ಸಮ್ಮುಖದಲ್ಲಿ ದೇವೇಂದ್ರಗೌಡನೊಂದಿಗೆ ಕಳೆದ ಮಾ. 31ರಂದು ಬಾಲಕಿಯ ನಿಶ್ಚಿತಾರ್ಥವಾಗಿತ್ತು. ಆದರೆ, ಅಪ್ರಾಪ್ತ ವಯಸ್ಸಿನ ಹುಡುಗಿ ಬೇರೆಯವನನ್ನು ಪ್ರೀತಿಸುತ್ತಿದ್ದ ಕಾರಣ ದೇವೇಂದ್ರಗೌಡನಿಂದ ತಪ್ಪಿಸಿಕೊಳ್ಳಲು ಆತನ ಕೊಲೆಗೆ ಸ್ಕೇಚ್ ಹಾಕಿಟ್ಟಿದ್ದಳು. ಇದರ ಅರಿವಿಲ್ಲದ ದೇವೇಂದ್ರಗೌಡ ಆಕೆಯ ಬರ್ಥ್​​ಡೇ ಸಲುವಾಗಿ ನಿನ್ನನ್ನು ಭೇಟಿ ಮಾಡಿ, ಉಡುಗೊರೆ ಕೊಡಿಸಲು ಬರುತ್ತೀರುವೆ ಎಂದು ಮೊದಲೇ ಫೋನ್ ಮಾಡಿ ಹೇಳಿದ್ದ. ಆತನನ್ನು ಮುಗಿಸಲು ಇದೇ ಸರಿಯಾದ ಸಮಯ ಎಂದು ಸ್ಕೇಚ್ ಹಾಕಿದ ಅಪ್ರಾಪ್ತ ವಯಸ್ಸಿನ ಹುಡುಗಿ ಮೊದಲೇ ಚಾಕೂ ಇಟ್ಟುಕೊಂಡಿದ್ದಳು. ಆತ ಬಂದ ಮೇಲೆ ಮಾರುಕಟ್ಟೆಗೆ ಕರೆದುಕೊಂಡು ಹೋಗಿ ಹೊಸ ಎರಡು ವೇಲ್, ಒಂದು ಕರ್ಚಿಫ್ ಖರೀದಿಸಿದ್ದಳು.

ಯೇಸುವಿನ ರೀತಿ ರೀಲ್ಸ್ ಮಾಡೋಣ...

ದೇವೇಂದ್ರಗೌಡನನ್ನು ಪಾರ್ಕ್​ಗೆ ಕರೆದುಕೊಂಡು ಹೋದ ಅಪ್ರಾಪ್ತ ವಯಸ್ಸಿನ ಹುಡುಗಿ ಯೇಸುವಿನ ರೀತಿಯಲ್ಲಿ ರೀಲ್ಸ್ ಮಾಡೋಣ ಎಂದು ಆತನನ್ನು ನಂಬಿಸಿದ್ದಳು. ಅದೇ ರೀತಿಯಲ್ಲಿ ಪಾರ್ಕ್ ಕಬ್ಬಿಣದ ಕಾಂಪೌಂಡ್‌ಗೆ ಆತನ ಎರಡೂ ಕೈಗಳನ್ನು ಅಗಲಿಸಿ ವೇಲ್‌ನಿಂದ ಕಾಂಪೌಂಡ್‌ಗೆ ಕಟ್ಟಿದ್ದಳು. ಕಣ್ಣುಗಳಿಗೆ ಕರ್ಚಿಫ್ ಕಟ್ಟಿದ್ದಳು. ನಂತರ ರೀಲ್ಸ್ ಬದಲು ರಿಯಲ್ ಆಗಿ ಆತನ ಜೀವ ತೆಗೆಯುವ ಸಾಹಸಕ್ಕೆ ಅಪ್ರಾಪ್ತ ವಯಸ್ಸಿನ ಹುಡುಗಿ ಕೈ ಹಾಕಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಿಯಕರ ಕುಮ್ಮಕ್ಕು ಶಂಕೆ...

ಅಪ್ರಾಪ್ತ ವಯಸ್ಸಿನ ಹುಡುಗಿ ಕೊಲೆಗೆ ಯತ್ನಿಸಿದ ಸಮಯದಲ್ಲಿ ಘಟನಾ ಸ್ಥಳದಲ್ಲಿ ಆಕೆಯನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಆದರೆ, ಕೃತ್ಯ ನಡೆಯುವ ಹಿಂದಿನ ದಿನಗಳಲ್ಲಿ ಆಕೆ ತನ್ನ ಪ್ರಿಯಕರನ ಜತೆ ಫೋನ್‌ನಲ್ಲಿ ಮಾತನಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.