ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಮತ್ತು ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಕಾಂಬಿನೇಷನ್ನಲ್ಲಿ ಸಿನಿಮಾ ತಯಾರಾಗಲಿದೆ ಎಂಬ ಸುದ್ದಿ ಹರಿದಾಡಿದ್ದಾಗ ಅಭಿಮಾನಿ ವಲಯದಲ್ಲಿ ಮನೆ ಮಾಡಿದ್ದ ಸಂಭ್ರಮ ಅಷ್ಟಿಷ್ಟಲ್ಲ. ಕಳೆದ ವರ್ಷವೇ ಈ ಜೋಡಿಯ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆಯಾದರೂ ಇದೂವರೆಗೂ ಆ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ.
ಅಂದರೆ, ಅಟ್ಲಿ ಮತ್ತು ಶಾರುಖ್ ಸಿನಿಮಾ ಯಾವಾಗ ಶುರು ಎಂಬುದರ ಬಗ್ಗೆ ಸಣ್ಣ ಸುಳಿವು ಸಿಕ್ಕಿದ್ದು, ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಶುರುವಾಗಲಿದೆಯಂತೆ. ಸದ್ಯಕ್ಕೆ ವಾರ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದು, ಇನ್ನೇನು ಆ ಸಿನಿಮಾ ಮುಗಿಯುತ್ತಿದ್ದಂತೆ, ಅಟ್ಲಿ ಜತೆ ಕೈ ಜೋಡಿಸಲಿದ್ದಾರೆ.
ಇತ್ತ ರಾಜ್ಕುಮಾರ್ ಹಿರಾನಿ ಸಿನಿಮಾದಲ್ಲೂ ಶಾರುಖ್ ನಟಿಸಲಿದ್ದಾರೆ ಎಂಬ ಸುದ್ದಿ ಇದೆಯಾದರೂ, ಕಥೆ ವಿಚಾರವಾಗಿ ರಾಜ್ಕುಮಾರ್ ಕೆಲಸ ಮುಂದುವರಿಸಿದ್ದಾರೆ. ಹಾಗಾಗಿ 2021ಕ್ಕೆ ಅಟ್ಲಿ ನಿರ್ದೇಶನದ ಸಿನಿಮಾ ಸೆಟ್ಟೇರುವುದು ಖಚಿತ ಎನ್ನಲಾಗುತ್ತಿದೆ.
ಅಂದಹಾಗೆ, ಆ ಚಿತ್ರಕ್ಕೆ ಸ್ವತಃ ಶಾರುಖ್ ಬಂಡವಾಳ ಹೂಡಲಿದ್ದಾರೆ. ಹೋಮ್ ಬ್ಯಾನರ್ ರೆಡ್ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಸಿನಿಮಾ ತಯಾರಾಗಲಿದೆ.