ಕೊಲ್ಕತಾ: ಬಂಗಾಳ ಕೊಲ್ಲಿಯಲ್ಲಿ ರೌದ್ರಾವಾತಾರ ತಾಳಿರುವ ವರ್ಷದ ಅತ್ಯಂತ ಕೆಟ್ಟ ಚಂಡಮಾರುತ ಅಂಫಾನ್ಗೆ ಈಗಾಗಲೇ ಪಶ್ಚಿಮ ಬಂಗಾಳದ 12 ಮಂದಿ ಬಲಿಯಾಗಿದ್ದಾರೆಂದು ಬುಧವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ.
ಪ್ರಬಲವಾದ ಸೈಕ್ಲೋನ್ ಸಾವಿರಾರು ಮನೆಗಳನ್ನು ನೆಲಸಮ ಮಾಡಿದ್ದು, ಕರೊನಾ ವೈರಸ್ ಬಿಕ್ಕಟ್ಟಿನ ನಡುವೆ ಪಶ್ಚಿಮ ಬಂಗಾಳ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡುವಂತಾಗಿದೆ. ಗಂಟೆಗೆ 185 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಅಂಫಾನ್ನ ಪ್ರಭಾವ ಕರೊನಾ ವೈರಸ್ಗಿಂತಲೂ ತುಂಬಾ ಕೆಟ್ಟದ್ದಾಗಿದ್ದು, 1 ಲಕ್ಷ ಕೋಟಿ ರೂ. ಹಾನಿ ಮಾಡಿದೆ ಎಂದು ಮಮತಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಾಗೂ ಒಡಿಶಾದಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಜನರು ಆಶ್ರಯ ತಾಣದಲ್ಲಿದ್ದಾರೆ. ಪಶ್ಚಿಮ ಬಂಗಾಳ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ತೀವ್ರ ಹೊಡೆತಕ್ಕೆ ಸಿಲುಕಿವೆ. ಹಲವು ವರ್ಷಗಳ ಬಳಿಕ ಎದುರಾದ ಅತ್ಯಂತ ಕೆಟ್ಟ ಚಂಡಮಾರುತ ಇದಾಗಿದೆ.
ಚಂಡಮಾರುತದ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಕಾರುಗಳು ತರಗೆಲೆಗಳಂತೆ ಉರುಳಿ ಬೀಳುತ್ತಿವೆ. ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಅನೇಕ ಏರಿಯಾಗಳಲ್ಲಿ ವಿದ್ಯುತ್ ಇಲ್ಲದೇ ಕತ್ತಲೆ ಕವಿದಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ಬೇರು ಸಮೇತ ಧರೆಗೆ ಉರುಳುತ್ತಿವೆ. ನಿನ್ನೆ ರಾತ್ರಿ ಕೊಲ್ಕತಾ ಸೇರಿದಂತೆ ಅನೇಕ ಜಿಲ್ಲೆಗಳು ವಿದ್ಯುತ್ ಸಮಸ್ಯೆಯನ್ನು ಎದುರಿಸಿದವು.
ಕರೊನಾ ಸಮಯದಲ್ಲಿ ಚಂಡಮಾರುತ ಎಬ್ಬಿರುವುದು ನಮಗೆ ಎರಡು ಸವಾಲುಗಳಾಗಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥ ಎಸ್.ಎನ್. ಪ್ರಧಾನ್ ಅವರು ಹೇಳಿದ್ದಾರೆ. (ಏಜೆನ್ಸೀಸ್)