ನ್ಯೂಸ್

ಆಕ್ಸ್​ಫರ್ಡ್​ ವಿವಿ ಕರೊನಾ ಲಸಿಕೆ ಕ್ಲಿನಿಕಲ್​ ಟ್ರಯಲ್​ ಸ್ಥಗಿತ; ಲಸಿಕೆ ಪಡೆದ ವ್ಯಕ್ತಿಗೆ ಏನಾಗಿದೆ..?

rameshmysuru

ನವದೆಹಲಿ: ಕರೊನಾ ಲಸಿಕೆ ಸಂಶೋಧನೆಯಲ್ಲಿ ಭಾರಿ ಮುಂಚೂಣಿಯಲ್ಲಿರುವ ಹಾಗೂ ಅತಿ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಒದಗಿಸಲಿರುವ ಆಕ್ಸ್​ಫರ್ಡ್​ ವಿವಿಯ ಔಷಧದ ಕ್ಲಿನಿಕಲ್​ ಟ್ರಯಲ್​ ಸದ್ಯಕ್ಕೆ ಸ್ಥಗಿತಗೊಂಡಿದೆ.

ಲಸಿಕೆ ಪಡೆದ ವ್ಯಕ್ತಿಯೊಬ್ಬರಲ್ಲಿ ಗಂಭೀರ ಅಡ್ಡ ಪರಿಣಾಮ ಹಾಗೂ ವಿವರಣೆ ಸಿಗದ ಸ್ಥಿತಿ ಉಂಟಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಆಕ್ಸ್​ಫರ್ಡ್​ ವಿವಿ ತಂಡ ಅಭಿವೃದ್ಧಿಪಡಿಸುತ್ತಿರುವ ಈ ಲಸಿಕೆಯನ್ನು ಸದ್ಯ ಅಮೆರಿಕ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಸೇರಿ ​60 ಕಡೆಗಳಲ್ಲಿ ಮೂರನೇ ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಭಾರತದಲ್ಲೂ ಈ ಲಸಿಕೆಯ ಎರಡನೇ ಹಾಗೂ ಮೂರನೇ ಹಂತದ ಪರೀಕ್ಷೆಗೆ ಅನುಮತಿ ನೀಡಲಾಗಿದೆ. ಮೈಸೂರಿನ ಜೆಎಸ್​ಎಸ್​ ಆಸ್ಪತ್ರೆ ಸೇರಿ 17 ಕಡೆಗಳಲ್ಲಿ ಮಾನವರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಸದ್ಯ ಇದನ್ನೂ ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಕರೊನಾ ವೈರಸ್​ ಸೋಂಕು ಹರಡುವುದನ್ನು ತಡೆಯಲು ತ್ವರಿತವಾಗಿ ಲಸಿಕೆ ಪಡೆಯುವ ಗುರಿಗೆ ಇದೊಂದು ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ. ಜನರಲ್ಲಿದ್ದ ಭಾರಿ ನಿರೀಕ್ಷೆಗೂ ನೀರೆರೆಚಿದಂತಾಗಿದೆ.

ಆದರೆ, ಲಸಿಕೆ ಸಂಶೋಧನೆ ವೇಳೆ ಇಂಥದ್ದೊಂದು ಬೆಳವಣಿಗೆ ಅನಿರೀಕ್ಷಿತವೇನಲ್ಲ. ಇಂಥವುಗಳನ್ನು ನಿವಾರಿಸಿಕೊಂಡೇ ಲಸಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಪ್ರಯೋಗ ಹಂತದಲ್ಲಿ ಇಂಥ ತೊಂದರೆಗಳು ಎದುರಾಗುವುದು ಕೂಡ ಉತ್ತಮ ಬೆಳವಣಿಗೆಯೇ ಆಗಿರುತ್ತದೆ. ಇದೆಲ್ಲವನ್ನೂ ಮೀರಿ ಅತ್ಯಂತ ಸುರಕ್ಷಿತ ಲಸಿಕೆ ತಯಾರಿಯ ಹೊಣೆ ಕಂಪನಿ ಮೇಲಿರುತ್ತದೆ ಎಂದೇ ತಜ್ಞರು ಹೇಳುತ್ತಾರೆ.