ಶ್ರೀನಗರ: 90 ಸದಸ್ಯಬಲದ ಜಮ್ಮು ಕಾಶ್ಮೀರ ವಿಧಾನಸಭೆಗೆ ನಡೆದ ಚುನಾವಣೆಗೆ (Assembly Election Results) ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ (Vote Counting) ಮುಂದುವರೆದಿದ್ದು, ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವು ಮುನ್ನಡೆ ಸಾಧಿಸಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ.
ಕಣಿವೆ ರಾಜ್ಯದಲ್ಲಿ ದಶಕದ ಬಳಿಕ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್ಸಿ ಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದವು. ಅದರಂತೆ ಎನ್ಸಿ 39, ಕಾಂಗ್ರೆಸ್ 8, ಬಿಜೆಪಿ 28 ಹಾಗೂ ಪಿಡಿಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್ಸಿ ಮೈತ್ರಿ ಗೆಲುವು ಖಚಿತವಾಗಿದ್ದು, ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದು ಖಾತ್ರಿಯಾಗಿದೆ. ಆರಂಭಿಕ ಟ್ರೆಂಡ್ ಪ್ರಕಾರ ಮುನ್ನಡೆ ಸಾಧಿಸಿದ್ದ ಬಿಜೆಪಿ ಆ ಬಳಿಕ ಹಿನ್ನಡೆ ಅನುಭವಿಸಿತು. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದ್ದು, ಕಾಂಗ್ರೆಸ್-ಎನ್ಸಿ ಮೈತ್ರಿಕೂಟಕ್ಕೆ ಗೆಲುವು ಖಾತ್ರಿಯಾಗಿದೆ.
ಲೋಕಸಭೆಯ (Loksabha) ಬಳಿಕ ನಡೆಯುತ್ತಿರುವ ಮೊದಲ ರಾಜ್ಯ ವಿಧಾನಸಭೆ ಚುನಾವಣೆಯು(State Assembly Elections) ಮುಂಬರುವ ಮಹಾರಾಷ್ಟ್ರ (Maharashtra) ಹಾಗೂ ಜಾರ್ಖಂಡ್ (Jharkhand) ಎಲೆಕ್ಷನ್ಗೆ ದಿಕ್ಸೂಚಿಯಾಗಿದ್ದು, ಬಿಜೆಪಿ ನೇತೃತ್ವದ ಎನ್ಡಿಎಗೆ ಈ ಚುನಾವಣೆ ದೊಡ್ಡ ಅಗ್ನಿಪರೀಕ್ಷಯಾಗಿದೆ. ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದ್ದು, ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.