ನ್ಯೂಸ್

ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮೇಲೆ ಹಲ್ಲೆ; ಕುಡಿದ ಅಮಲಿನಲ್ಲಿ‌ ಹಿಗ್ಗಾಮುಗ್ಗಾ ಥಳಿತ, ಜೆಡಿಎಸ್ ಧುರೀಣೆ ಪುತ್ರನ ಬಂಧನ!

ವಿಜಯಪುರ: ಮಹಾನಗರ ಪಾಲಿಕೆ ಆಯುಕ್ತರ ವಾಹನಕ್ಕೆ ಕುಡಿದ ಅಮಲಿನಲ್ಲಿ ಬೈಕ್ ಗುದ್ದಿದ್ದಲ್ಲದೇ ಜಗಳ ಕಾದು ಆಯುಕ್ತರನ್ನೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ‌. ಇಲ್ಲಿನ ರಿಂಗ್ ರೋಡ್​ನಲ್ಲಿರುವ ಬಳಮಕರ ಮಂಗಲ ಕಾರ್ಯಾಲಯ ಬಳಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ರಾತ್ರಿ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆಲಕುಂಟೆ ನಗರದ ನಿವಾಸಿ ಸಮರ್ಥ ಶಿವಕುಮಾರ ಸಿಂದಗಿ(25), ಸುರೇಶ ಊರ್ಫ್ ಸೂರಿ ಅಪ್ಪಾಸಾಹೇಬ ಪೂಜಾರಿ ಹಾಗೂ ಇನ್ನಿಬ್ಬರು ಸೇರಿ ಈ ಕೃತ್ಯ ಎಸಗಿದ್ದಾರೆ. ಆಯುಕ್ತ ಮೆಕ್ಕಳಕಿ ಬಳಮಕರ ಮಂಗಲ ಕಾರ್ಯಾಲಯದ ಬಳಿ ಕಾರ್ ನಿಲ್ಲಿಸಿ ರಸ್ತೆ ಪರಿಶೀಲನೆ ನಡೆಸುತ್ತಿರುವಾಗ ಎದುರಿನಿಂದ ಬಂದ ಸಮರ್ಥ ಹಾಗೂ ಆತನ ಸಹಚರರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಈ ವೇಳೆ ಸಾವಕಾಶವಾಗಿ ನೋಡಿಕೊಂಡು ವಾಹನ ಚಲಾಯಿಸಬೇಕೆಂದು ಆಯುಕ್ತರು ತಿಳಿ ಹೇಳಲು ಮುಂದಾಗಿದ್ದಾರೆ. ಆಗ ಅಮಲಿನಲ್ಲಿದ್ದ ಸಮರ್ಥ ಮತ್ತು ಸಹಚರರು ರಸ್ತೆ ಮಧ್ಯೆ ನಿಂದೇನು ಕೆಲಸ ಎಂದು ಜಗಳ ಕಾದಿದ್ದಾರೆ. ತಾವೊಬ್ಬ ಪಾಲಿಕೆ ಕಮಿಷನರ್ ಎಂದು ಹೇಳಿದರೂ ಕೇಳದೆ ಮುಖಕ್ಕೆ ಬಲವಾಗಿ ಗುದ್ದಿದ್ದಾರೆ. ಪೊಲೀಸರು ಬಿಡಿಸಲು ಹೋದರೂ ಕೇಳಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ತಾವೊಬ್ಬ ರಾಜಕೀಯ ನಾಯಕರ ಹಿಂಬಾಲಕರು, ಸುಮ್ಮನಿರದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಹೇಳುತ್ತಲೇ ಮತ್ತೆ ಮತ್ತೆ ಥಳಿಸಿದ್ದಾರೆ. ಕತ್ತು ಹಿಸುಕಿ ಉಸಿರುಗಟ್ಟಿಸಲು ನೋಡಿದ್ದಾರೆ.

ಬಳಿಕ ಪೊಲೀಸರು ಅವರನ್ನು ಬಿಡಿಸಿ ವಶಕ್ಕೆ ಪಡೆಯುವ ವೇಳೆ ಸಮರ್ಥ ಸಿಕ್ಕಿದ್ದು ಇನ್ನುಳಿದವರು ಪರಾರಿಯಾಗಿದ್ದಾರೆ. ಸಮರ್ಥನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ‌. ಬಂಧಿತ ಆರೋಪಿ ಅಮರ್ಥ ಜೆಡಿಎಸ್ ಧುರೀಣೆ ಸ್ನೇಹಲತಾ ಶೆಟ್ಟಿ ಪುತ್ರ ಎನ್ನಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಅಧಿಕಾರಿ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.