ನ್ಯೂಸ್

"ನಾವು ನಿಮ್ಮ ಮಕ್ಕಳು" ಪೋಸ್ಟರ್​ ನೋಡಿ ಅಜ್ಜ ಗಳಗಳನೆ ಅತ್ತದ್ದೇಕೆ?

ನವದೆಹಲಿ: ಇದು ಲಾಕ್​ಡೌನ್​ ಸಮಯ. ಲಾಕ್​ಡೌನ್​ಗಿಂತ ಮುಂಚೆ ಎಲ್ಲೆಲ್ಲೋ ಇದ್ದವರು ತಮ್ಮೂರಿಗೆ ಬರಲಾರದೇ ಪರದಾಡುವ ಅವಧಿಯಿದು. ಮನೆಯಲ್ಲಿ ಒಂಟಿ ವೃದ್ಧರಿದ್ದರೂ, ಅನಾರೋಗ್ಯಪೀಡಿತರಿದ್ದರೂ ಊರು ಬಿಟ್ಟು ಹೋದವರು ವಾಹನವಿಲ್ಲದೇ ವಾಪಸ್​ ಬರಲಾಗದೇ ಪರದಾಡುವ ಸಮಯವಿದು.

ಹೌದು. ಇಂಥದ್ದೇ ಒಂದು ಪ್ರಸಂಗ ಎದುರಾದದ್ದು ಅಸ್ಸಾಂನ 78 ವರ್ಷದ ವೃದ್ಧ ಕೆ.ಪಿ.ಅಗರವಾಲ್​ ಅವರಿಗೆ. ಅವರ ಹೆಂಡತಿ ಮತ್ತು ಮಕ್ಕಳು ಲಾಕ್​ಡೌನ್​ ಘೋಷಣೆಯಾಗುವ ಮೊದಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅವರು ಅಲ್ಲಿಯೇ ಇದ್ದಾಗ ದಿಢೀರ್​ ಲಾಕ್​ಡೌನ್​ ಘೋಷಣೆಯಾಯಿತು. ಇದರಿಂದ ವಾಪಸ್​ ಊರಿಗೆ ಬರಲು ಆಗಲಿಲ್ಲ.

ಮನೆಯಲ್ಲಿ ಅಗರವಾಲ್​ ಒಬ್ಬರೇ ಇರುವ ಸ್ಥಿತಿ. ಲಾಕ್​ಡೌನ್​ ಮುಗಿಯುವ ಸಮಯವನ್ನೇ ಕಾಯುತ್ತಿದ್ದರು ಇವರು. ಒಂಟಿಯಾಗಿದ್ದು ಸೋತು ಹೋಗಿದ್ದರೂ ಏನೂ ಮಾಡದ ಅಸಹಾಯಕರಾಗಿದ್ದರು.

ಮೇ 4. ಇವರು 78 ವರ್ಷ ಮುಗಿಸಿ 79ನೇ ವರ್ಷಕ್ಕೆ ಕಾಲಿಡುವ ದಿನ. ಮನೆಯಲ್ಲಿ ಯಾರೂ ಇರಲಿಲ್ಲ. ತನ್ನವರನ್ನು ನೆನೆದು ಅಗರವಾಲ್​ ಅವರು ಭಾವುಕರಾಗಿ ಮನೆಯ ಹೊರಕ್ಕೆ ಕಾಲಿಟ್ಟಾಗ ಅಲ್ಲಿ ಕೆಲವು ಪೊಲೀಸರು ನಿಂತಿದ್ದರು. ಅವರು ಪೋಸ್ಟರ್​ ಹಿಡಿದುಕೊಂಡಿದ್ದರು. ಅದರಲ್ಲಿ "ನಾನು ನಿಮ್ಮ ಮಗಳು" "ನಾನು ನಿಮ್ಮ ಮಗ" ಎಂದು ಬರೆಯಲಾಗಿತ್ತು!‘

ಇದೇನಿದು ಎಂದು ನೋಡುವಷ್ಟರಲ್ಲಿಯೇ ಅಲ್ಲಿದ್ದ ಪೊಲೀಸ್​ ಅಜ್ಜನ ತಲೆಗೆ ಹುಟ್ಟುಹಬ್ಬದ ಕ್ಯಾಪ್​ ಹಾಕಿ, ಅವರಿಗೆ ಕೇಕ್​ ತಿನ್ನಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು! ಈ ಅನಿರೀಕ್ಷಿತ ಘಟನೆಯಿಂದ ಭಾವುಕರಾದ ಅಗರವಾಲ್​ ಅವರು ಕಣ್ಣೀರಾದರು.

ಇವರು ಮನೆಯಲ್ಲಿ ಒಬ್ಬರೇ ಇದ್ದುದು ಹಾಗೂ ಇವರ ಹುಟ್ಟುಹಬ್ಬದ ಬಗ್ಗೆ ಅಕ್ಕಪಕ್ಕದ ಮನೆಯವರಿಂದ ತಿಳಿದುಕೊಂಡಿದ್ದ ಪೊಲೀಸರು ಹೀಗೊಂದು ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದರು.

ಈ ಘಟನೆಯ ವೀಡಿಯೋ ವೈರಲ್​ ಆಗಿದ್ದು, ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಬಹು ಶ್ಲಾಘನೆ ವ್ಯಕ್ತವಾಗಿದೆ. ಸಾರ್ವಜನಿಕರ ಸೇವೆಯೇ ನಮ್ಮ ಧ್ಯೇಯವಾಗಿದ್ದು, ಲಾಕ್​ಡೌನ್​ ಅವಧಿಯಲ್ಲಿ ಎಲ್ಲರ ಹಿತವನ್ನೂ ನಾವು ಕಾಪಾಡುತ್ತೇವೆ ಎಂದಿದ್ದಾರೆ ಪೊಲೀಸರು (ಏಜೆನ್ಸೀಸ್​)