ನವದೆಹಲಿ: ಆರ್ಥಿಕ ಸಂಕಷ್ಟ, ಉಗ್ರವಾದ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನವು ಜಗತ್ತಿನ ಮುಂದೆ ಬೆತ್ತಲಾಗಿದ್ದರು ಭಾರತದ ವಿರುದ್ಧ ಆರೋಪ ಮಾಡುವುದನ್ನು ಮಾತ್ರ ಬಿಡುವುದಿಲ್ಲ. ಸದಾ ಒಂದಿಲ್ಲೊಂದು ಕ್ಷುಲಕ ಆರೋಪಗಳನ್ನು ಮಾಡುತ್ತ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುವ ಪಾಕಿಸ್ತಾನ ಇದೀಗ ತನ್ನ ದೇಶದಲ್ಲಿ ವಾಯುಮಾಲಿನ್ಯ (Air Pollution) ಉಂಟಾಗಲು ಭಾರತ ಕಾರಣ ಎಂದು ಹೇಳುವ ಮೂಲಕ ಸೌಂಡ್ ಮಾಡುತ್ತಿದ್ದು, ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ.
ಪಾಕಿಸ್ತಾನದ ಎರಡನೇ ಅತಿದೊಡ್ಡ ನಗರವಾದ ಲಾಹೋರ್ನಲ್ಲಿ ನವೆಂಬರ್ 03ರಂದು ಹವಾಮಾನ ಹದಗೆಟ್ಟು ವಾಯುಮಾಲಿನ್ಯ ಉಂಟಾಗಿದ್ದ ಪರಿಣಾಮ ಸಂಪೂರ್ಣ ನಗರವು ಹೊಗೆಯಿಂದ ಆವೃತವಾಗಿತ್ತು. ವಾಯು ಗುಣಮಟ್ಟ ಸೂಚ್ಯಂಕವು (AQI) 1,067ಕ್ಕೆ ತಲುಪಿತ್ತು. ಸ್ವಿಜರ್ಲೆಂಡ್ ಮೂಲದ ವಾಯು ಗುಣಮಟ್ಟದ ವಾಚ್‌ಡಾಗ್ IQAir ಈ ಗಾಳಿಯ ಗುಣಮಟ್ಟವನ್ನು ಅಪಾಯಕಾರಿ ಎಂದು ಸಂಸ್ಥೆ ಎಚ್ಚರಿಸಿತ್ತು. ಆದರೆ. ವಾಯುಮಾಲಿನ್ಯ ಉಂಟಾಗಲು ಭಾರತ ಕಾರಣ ಎಂದು ಅಲ್ಲಿನ ಸಚಿವರು ದೂಷಿಸಿದ್ದು, ಈ ಬಗ್ಗೆ ಕಾರಣವನ್ನು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವೆ ಮರ್ಯಮ್ ಔರಂಗಜೇಬ್, ಭಾರತದಿಂದ ಪಾಕಿಸ್ತಾನಕ್ಕೆ ಬರುತ್ತಿರುವ ಹೊಗೆಯಿಂದಲೇ ಈ ರೀತಿ ವಾಯುಮಾಲಿನ್ಯ (Air Pollution) ಉಂಟಾಗಲು ಕಾರಣ. ಇನ್ನೂ ಕನಿಷ್ಠ ಒಂದು ವಾರದವರೆಗೆ ಗಾಳಿಯು ಲಾಹೋರ್ ಕಡೆಗೆ ಬೀಸಲಿದೆ. ನಾಗರೀಕರು ಮನೆಯೊಳಗೆ ಇರಲು, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕಿದ್ದು, ಆಸ್ಪತ್ರೆಗಳಲ್ಲಿ ಸ್ಮಾಗ್ ಕೌಂಟರ್‌ಗಳನ್ನು ತೆರೆಯಲಾಗಿದೆ. ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ವರ್ಕ್ಫ್ರಮ್ ಹೋಮ್ ನೀಡಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಮ್ಯಾಪಿಂಗ್ ಹಾಗೂ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದ್ಧಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಚಿವೆ ಮರ್ಯಮ್ ಔರಂಗಜೇಬ್ ಕರೆ ನೀಡಿದ್ದಾರೆ.