ನವದೆಹಲಿ: ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹಗೊಂಡ ಬೆನ್ನಲ್ಲೇ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು 2018ರಲ್ಲಿ ಕಾಂಗ್ರೆಸ್ನ ವಕ್ತಾರೆ ಆಗಿದ್ದಂತಹ ಸಂದರ್ಭದಲ್ಲಿ ಮಾಡಿರುವ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಆ ಟ್ವೀಟ್ಗೆ ಖುಷ್ಬೂ ಸ್ಪಷ್ಟನೆ ನೀಡಿದ್ದಾರೆ.
2018ರಲ್ಲಿ ಟ್ವೀಟ್ ಮಾಡಿದ್ದ ಖುಷ್ಬೂ, ಪ್ರತಿಯೊಬ್ಬ ಮೋದಿಯ ಮುಂದೆ ಭ್ರಷ್ಟಾಚಾರದ ಉಪನಾಮವಿದೆ. ಮೋದಿ ಎಂದರೆ ಭ್ರಷ್ಟಾಚಾರ ಎಂಬುದು ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಹೀಗಾಗಿ ಮೋದಿ ಅರ್ಥವನ್ನು ಭ್ರಷ್ಟಾಚಾರ ಎಂದು ಬದಲಾಯಿಸಿ, ಏಕೆಂದರೆ ಅದು ಅವರಿಗೆ ಸರಿ ಹೊಂದುತ್ತದೆ. ನೀರವ್, ಲಲಿತ್ ನಮೋ= ಭ್ರಷ್ಟಾಚಾರ ಎಂದು ಖುಷ್ಬೂ ಟ್ವೀಟ್ ಮಾಡಿದ್ದರು.
ಖುಷ್ಬೂ ಮಾಡಿದ್ದ ಟ್ವೀಟ್, 2019ರಲ್ಲಿ ರಾಹುಲ್ ಗಾಂಧಿ ಆಡಿದ್ದ ಮಾತಿನ ನಿಖರ ಪಡಿಯಚ್ಚು ಆಗಿತ್ತು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಚಾರ ಮಾಡುವಾಗ ಮಾತನಾಡಿದ್ದ ರಾಹುಲ್, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸದಸ್ಯರೂ ಆಗಿರುವ ಖುಷ್ಬೂ ತಮ್ಮ ಹಳೆಯ ವೈರಲ್ ಟ್ವಿಟ್ಗೆ ಸ್ಪಷ್ಟನೆ ನೀಡಿದ್ದು, ನಾನು ಕಾಂಗ್ರೆಸ್ನಲ್ಲಿದ್ದಾಗ ಮೋದಿ ಕುರಿತು ಮಾಡಿದ್ದ ಟ್ವೀಟ್ ಬಗ್ಗೆ ನಾನೇನು ನಾಚಿಕೆಪಟ್ಟುಕೊಳ್ಳುವುದಿಲ್ಲ. ನಾನು ಪಕ್ಷದ ನಾಯಕರನ್ನು ಅನುಸರಿಸುತ್ತಿದ್ದೆ ಮತ್ತು ಆವಾಗ ಪಕ್ಷದ ಭಾಷೆಯನ್ನು ನಾನು ಮಾತನಾಡುತ್ತಿದ್ದೆ ಖುಷ್ಬೂ ಸಮರ್ಥನೆ ನೀಡಿದ್ದಾರೆ.
2019ರಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯಿಂದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅಸಮಾಧಾನಗೊಂಡು ದೂರು ದಾಖಲಿಸಿದ್ದರು. 2019ರ ಏಪ್ರಿಲ್ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಇದರ ಅಡಿಯಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಮೇಲ್ಮನವಿ ಸಲ್ಲಿಸಲು ರಾಹುಲ್ ಅವರಿಗೆ ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿದೆ. ಆದರೆ, ಸಂಸತ್ತಿನ ಕಾರ್ಯದರ್ಶಿ ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.
ಈ ಬಗ್ಗೆ ಭಾರಿ ಚರ್ಚೆಯಾಗುತ್ತಿರುವ ನಡುವೆಯೇ ಖುಷ್ಬೂ ಟ್ವೀಟ್ ಭಾರೀ ಚರ್ಚೆಯಾಗುತ್ತಿದೆ. ರಾಹುಲ್ಗೂ ಮುಂಚೆಯೇ ಖುಷ್ಬೂ ಟ್ವೀಟ್ ಮಾಡಿದ್ದು, ಪೂರ್ಣೇಶ್ ಮೋದಿ ಅವರು ಖುಷ್ಬೂ ವಿರುದ್ಧವೂ ದೂರು ದಾಖಲಿಸುತ್ತಾರಾ ಎಂದು ಕಾಂಗ್ರೆಸ್ ಬೆಂಬಲಿಗರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ನಲ್ಲಿದ್ದ ಖುಷ್ಬೂ 2021ರ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮೋದಿ ಎಂಬ ನಿಮ್ಮ ಶಿಷ್ಯನೊಬ್ಬ ಖುಷ್ಬೂ ಸುಂದರ್ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುವಂತೆ ಮಾಡುತ್ತೀರಾ? ಎಂದು ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಟ್ವೀಟ್ ಮೂಲಕ ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಲೋಕಸಭಾ ಸದಸ್ಯತ್ವದಿಂದ ರಾಹುಲ್ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಖುಷ್ಬೂ, ಕೆಲವು ದಿನಗಳ ಹಿಂದೆ ತಾನು ದುರದೃಷ್ಟವಶಾತ್ ಸಂಸದ ಎಂದು ರಾಹುಲ್ ಹೇಳಿಕೊಂಡಿದ್ದರು. ಅವರು ಮಾತು ಈಗ ನಿಜವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇಷ್ಟೇ ಅಲ್ಲದೆ, ರಾಹುಲ್ ವಿರುದ್ಧ ಕಿಡಿಕಾರಿರುವ ಖುಷ್ಬೂ, ಮನಮೋಹನ್ ಸಿಂಗ್ ಅವರು 2013ರಲ್ಲಿ ಹೊರಡಿಸಿದ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಸುಗ್ರೀವಾಜ್ಞೆಯನ್ನು ತರಲು ಬಯಸಿದ್ದರು. ರಾಹುಲ್ ಗಾಂಧಿ ಅದನ್ನು ತುಂಡುಗಳಾಗಿ ಹರಿದು ಹಾಕಿದರು. ವಿಪರ್ಯಾಸವೆಂದರೆ ಅವರ ಅನರ್ಹತೆಯು ಅದೇ ತೀರ್ಪಿನಿಂದ ಬಂದಿದೆ. ಕರ್ಮದ ಫಲ ಎಂದು ವ್ಯಂಗ್ಯವಾಡಿದ್ದಾರೆ.
ಮಾನಹಾನಿ ಪ್ರಕರಣದಲ್ಲಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್, 1951ರ ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ 8 ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಒಂದು ವೇಳೆ ಸೂರತ್ ನ್ಯಾಯಾಲಯ ನೀಡಿರುವ ತೀರ್ಪನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿದರೆ ರಾಹುಲ್ ನಿರಾಳರಾಗಲಿದ್ದಾರೆ. ಇನ್ನು ರಾಹುಲ್ರನ್ನು ಅನರ್ಹಗೊಳಿಸಿರುವ ನಿರ್ಧಾರ ಕೇಂದ್ರದ ರಾಜಕೀಯ ದ್ವೇಷ ಎಂದು ಆರೋಪ ಮಾಡಿದ್ದಾರೆ. (ಏಜೆನ್ಸೀಸ್)