More

    31ರೊಳಗೆ ಈ ಐದು ಕೆಲಸ ಮುಗಿಸಿ; ಬಾಕಿ ಇಟ್ಟರೆ ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆ

    ಪ್ರಸಕ್ತ ಆರ್ಥಿಕ ಸಾಲು ಇನ್ನೊಂದು ವಾರದಲ್ಲಿ ಕೊನೆಯಾಗಲಿದ್ದು, ಮಾರ್ಚ್ 31ರೊಳಗೆ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾದ ಪ್ರಮುಖ ಐದು ಕಾರ್ಯಗಳು ಇಲ್ಲಿವೆ. ಈ ಕೆಲಸಗಳನ್ನು ಬಾಕಿ ಇಟ್ಟರೆ ಆರ್ಥಿಕವಾಗಿ ನಷ್ಟ ಉಂಟಾಗುವ ಸಾಧ್ಯತೆ ಇದೆ.

    1. ಪ್ಯಾನ್-ಆಧಾರ್ ಸಂಖ್ಯೆ ಜೋಡಣೆ

    ಆದಾಯ ತೆರಿಗೆ ಇಲಾಖೆ ನೀಡಿರುವ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್)ಯನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಆಧಾರ್ ಸಂಖ್ಯೆ ಜತೆಗೆ ಜೋಡಣೆ ಮಾಡಲು ಮಾರ್ಚ್ 31 ಕಡೆಯ ದಿನವಾಗಿದೆ. ಈ ಗಡುವು ಕೋವಿಡ್ ಪೂರ್ವ ಕಾಲದಿಂದ ವಿಸ್ತರಣೆ ಆಗುತ್ತಿದ್ದು, ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಪ್ಯಾನ್-ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಬೇಕು. ಇಲ್ಲದಿದ್ದರೆ ಪ್ಯಾನ್ ನಿಷ್ಕ್ರಿಯ ಆಗುತ್ತದೆ. ಇದನ್ನು ಮತ್ತೆ ಸಕ್ರಿಯಗೊಳಿಸಿಕೊಳ್ಳಬೇಕಾದರೆ 10 ಸಾವಿರ ರೂ. ದಂಡ ಪಾವತಿಸಬೇಕು. ಪ್ಯಾನ್ ನಿಷ್ಕ್ರಿಯವಾದರೆ ಆದಾಯ ತೆರಿಗೆ ವಿವರ (ಐಟಿ ರಿಟರ್ನ್ಸ್) ಸಲ್ಲಿಸಲು ಆಗುವುದಿಲ್ಲ.

    2. ಮ್ಯೂಚುವಲ್ ಫಂಡ್​ಗಳಿಗೆ ನಾಮನಿರ್ದೇಶನ

    ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವವರು ನಾಮನಿರ್ದೇಶನ (ನಾಮಿನೇಷನ್) ಪ್ರಕ್ರಿಯೆಯನ್ನು 31ರೊಳಗೆ ಮುಗಿಸಬೇಕು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೂಚಿಸಿದೆ. ನಾಮನಿರ್ದೇಶನ ಮಾಡದ ಹೂಡಿಕೆದಾರರ ಪೋರ್ಟ್​ಫೋಲಿಯೊವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಪೋರ್ಟ್ ಫೋಲಿಯೊವನ್ನು ಮತ್ತೆ ಸಕ್ರಿಯಗೊಳಿಸಲು ಮೊದಲಿನಿಂದ ಎಲ್ಲ ವಿವರಗಳನ್ನು ನೀಡಬೇಕಾಗುತ್ತದೆ.

    3. ತೆರಿಗೆ ವಿನಾಯಿತಿ ಪಡೆಯಲು ಹೂಡಿಕೆ

    2022-23ನೇ ಸಾಲಿನ ತೆರಿಗೆ ವಿನಾಯಿತಿ ಪಡೆಯಲು ಬಯಸುವವರು ಮಾರ್ಚ್ 31 ರೊಳಗೆ ವಿನಾಯಿತಿ ಇರುವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು. ಆದಾಯ ತೆರಿಗೆ ಕಾಯ್ದೆ 80ಸಿ ವಿಧಿ ಅಡಿಯಲ್ಲಿ 1.50 ಲಕ್ಷ ರೂಪಾಯಿವರೆಗೆ ವಿನಾಯಿತಿ ಕೋರಿದರೆ ಸಾರ್ವಜನಿಕ ವಲಯದ ಸಣ್ಣ ಉಳಿತಾಯ ಯೋಜನೆ ಹಾಗೂ ತೆರಿಗೆ ಉಳಿಸುವ ನಿಶ್ಚಿತ ಠೇವಣಿಯ ಯೋಜನೆಯಲ್ಲಿ ಹಣ ತೊಡಗಿಸಬಹುದು.

    4. ಪಿಪಿಎಫ್ ಮತ್ತು ಎಸ್​ಎಸ್​ವೈಗೆ ಕನಿಷ್ಠ ಮೊತ್ತ ಜಮಾ

    ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (ಎಸ್​ಎಸ್​ವೈ) ಚಂದಾದಾರರು ಈ ಯೋಜನೆಯಲ್ಲಿ ಸಕ್ರಿಯರಾಗಿರಬೇಕಾದರೆ ಆರ್ಥಿಕ ವರ್ಷದಲ್ಲಿ ಒಮ್ಮೆಯಾದರೂ ಕನಿಷ್ಠ ಮೊತ್ತ ಜಮಾ ಮಾಡಬೇಕು. ಇದುವರೆಗೂ ಈ ಕಾರ್ಯ ಮಾಡದವರು ಮಾ.31ರೊಳಗೆ ಕನಿಷ್ಠ ಮೊತ್ತ ಭರ್ತಿ ಮಾಡಿ ಖಾತೆ ನಿಷ್ಕ್ರಿಯವಾಗುವುದನ್ನು ತಪ್ಪಿಸಬಹುದು.

    5. ವಯ ವಂದನಾ ಯೋಜನೆಗೆ ಕೊನೇ ದಿನ

    ಪ್ರಧಾನಮಂತ್ರಿ ವಯ ವಂದನಾ ಯೋಜನೆಗೆ (ಪಿಎಂವಿವಿವೈ) ಚಂದಾದಾರರಾಗಲು ಮಾರ್ಚ್ 31 ಕಡೆಯ ದಿನ. 60 ವರ್ಷದ ನಂತರ ಪಿಂಚಣಿ ಪಡೆಯಲು ಬಯಸುವವರು ಈ ಯೋಜನೆಗೆ ಸೇರಬಹುದಾಗಿದ್ದು, ಈ ಯೋಜನೆ ಪ್ರವೇಶ ಮಾರ್ಚ್ 31ಕ್ಕೆ ಮುಗಿಯಲಿದೆ. ಎಲ್​ಐಸಿ ಮೂಲಕ ಈ ಯೋಜನೆಯ ಚಂದಾದಾರಾಗಲು ಅವಕಾಶ ಇದ್ದು, ಠೇವಣಿ ಇರಿಸಿದ ಮೊತ್ತದ ಮೇಲೆ ಶೇ. 7.4 ಬಡ್ಡಿ ದೊರೆಯಲಿದೆ.

    ಲಿಂಕ್ ಆಗದಿದ್ದರೆ ಹೆಚ್ಚುವರಿ ತೆರಿಗೆ

    ಮಾರ್ಚ್ 31ರೊಳಗೆ ಪ್ಯಾನ್-ಆಧಾರ್ ಲಿಂಕ್ ಆಗದಿದ್ದರೆ ಏಪ್ರಿಲ್ 1ರಿಂದ ಪ್ಯಾನ್ ನಿಷ್ಕ್ರಿಯವಾಗುತ್ತದೆ ಮತ್ತು ತೆರಿಗೆದಾರರು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ), ಪ್ಯಾನ್-ಆಧಾರ್ ಸಂಖ್ಯೆ ಜೋಡಣೆ ಆಗಿರದಿದ್ದರೆ ಅಂಥ ತೆರಿಗೆದಾರರಿಂದ ಹೆಚ್ಚುವರಿ ಪ್ರಮಾಣದಲ್ಲಿ ಅಂದರೆ ಶೇ. 20 ಅಥವಾ ಯಾವುದು ಅನ್ವಯವೋ ಅದರಂತೆ ಮೂಲದಿಂದಲೇ ತೆರಿಗೆ ಕಡಿತ (ಟಿಡಿಎಸ್) ಮಾಡಲಾಗುತ್ತದೆ ಎಂದು ಹೇಳಿದೆ. ಸಾಮಾನ್ಯವಾಗಿ ಟಿಡಿಎಸ್​ನ ಕಡಿಮೆ ಸ್ತರ ಶೇ. 1ರಿಂದ ಆರಂಭವಾಗಿ ವಿವಿಧ ರೀತಿಯ ಆದಾಯ ಮತ್ತು ಹೂಡಿಕೆ ಭಿನ್ನ ಶ್ರೇಣಿಯಲ್ಲಿ ಇರುತ್ತದೆ.

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts