More

    ಡಿಸಿ ಹೆಸರಿನಲ್ಲಿ ಹಣ ಸುಲಿಗೆ!

    ಪೊಲೀಸರಿಗೇ ಗಾಳ ಹಾಕಿದ ಖದೀಮ

    ವಾಟ್ಸ್‌ಆ್ಯಪ್ ಡಿಪಿಯಲ್ಲಿ ಜಿಲ್ಲಾಧಿಕಾರಿ ೆಟೋ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ವಾಟ್ಸ್‌ಆ್ಯಪ್ ಡಿಪಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಭಾವಚಿತ್ರ ಬಳಸಿದ್ದ ಅನಾಮಿಕನೊಬ್ಬ ಹಲವು ಪೊಲೀಸರಿಗೆ ವಾಟ್ಸ್‌ಆ್ಯಪ್ ಸಂದೇಶ ರವಾನಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ವಿಶ್ವನಾಥಪುರ ಠಾಣೆಯಲ್ಲಿ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
    ಮೇ 9ರಂದು ಹಲವು ಪೊಲೀಸರ ಮೊಬೈಲ್‌ಗೆ ಸಂದೇಶ ಬಂದಿದೆ. ಜಿಲ್ಲಾಧಿಕಾರಿ ಹಣ ಕೇಳುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡಿದೆ. ಅದರಲ್ಲಿ ವಿಜಯಪುರ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಾಂತ್ ನಾಯಕ್, ಚನ್ನರಾಯಪಟ್ಟಣ ಠಾಣೆ ಪಿಎಸ್‌ಐ ಅಪ್ಪಣ್ಣ, ವಿಶ್ವನಾಥಪುರದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ನಂದೀಶ್ ಸೇರಿ ಹಲವರಿಗೆ ಸಂದೇಶ ಬಂದಿದೆ ಎನ್ನಲಾಗಿದೆ.
    ಪೊಲೀಸರಿಗೇ ಗಾಳ: ಈ ಅನಾಮಿಕ ಮುಖ್ಯವಾಗಿ ಪೊಲೀಸರಿಗೆ ಗಾಳ ಹಾಕಿರುವುದು ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ. ವಾಟ್ಸ್‌ಆ್ಯಪ್ ಡಿಪಿಯಲ್ಲಿ ಜಿಲ್ಲಾಧಿಕಾರಿ ಭಾವಚಿತ್ರವಿದ್ದ ಕಾರಣ ಕೆಲ ಕಾಲ ಪೊಲೀಸರು ಅವಾಕ್ಕಾಗಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ನಡುವೆ ಚರ್ಚೆಯೂ ನಡೆದಿದೆ. ಕಡೆಗೆ ಪೊಲೀಸರು ಇದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಸರ್ಕಾರಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ವಿಷಯ ತಿಳಿದು ಸ್ವತಹ ಜಿಲ್ಲಾಧಿಕಾರಿಯೂ ಶಾಕ್ ಆಗಿದ್ದಾರೆ.

    ಸಂದೇಶದಲ್ಲಿ ಏನಿದೆ? ನಾನು ಮುಖ್ಯವಾದ ಮೀಟಿಂಗ್‌ನಲ್ಲಿದ್ದೇನೆ. ಪ್ರಾಜೆಕ್ಟ್‌ವೊಂದಕ್ಕೆ ತುರ್ತಾಗಿ 50 ಸಾವಿರ ರೂಪಾಯಿ ಬೇಕಾಗಿದೆ. ಹಣವನ್ನು ತಕ್ಷಣ ಕನಕರಾಜು ಎಂಬುವವನಿಗೆ ಕಳುಹಿಸಿಕೊಡಿ ಎಂಬ ಸಂದೇಶ ರವಾನೆಯಾಗಿದೆ. ಪೊಲೀಸರಷ್ಟೇ ಅಲ್ಲದೆ ಆಯಕಟ್ಟಿನ ಹುದ್ದೆಯಲ್ಲಿರುವ ಹಲವು ಹಿರಿಯ ಅಧಿಕಾರಿಗಳ ಸಂಖ್ಯೆಗೂ ಇದೇ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಇದರಿಂದ ತಾಲೂಕು ಕಚೇರಿ ಸೇರಿ ಹಲವು ಸರ್ಕಾರಿ ಕಚೇರಿಗಳಲ್ಲಿ ಗುಸುಗುಸು ಶುರುವಾಗಿತ್ತು ಎನ್ನಲಾಗಿದೆ.

    ಆಪ್ತ ಸಹಾಯಕನಿಂದ ದೂರು ಜಿಲ್ಲಾಧಿಕಾರಿ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟು ವಾಟ್ಸ್‌ಆ್ಯಪ್ ಸಂದೇಶ ಹರಿದಾಡುತ್ತಿರುವುದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರ ಆಪ್ತ ಸಹಾಯಕ ಅಭೀಷೇಕ್ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ವಿಶ್ವನಾಥಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಹಿಂದೆಯೂ ಆಗಿತ್ತು ಈ ಹಿಂದೆಯೂ ಗ್ರಾಮಾಂತರ ಜಿಲ್ಲೆಯ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣಗಳು ನಡೆದಿವೆ. ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ಹಣ ಸುಲಿಗೆಗೆ ಸಂಚು ರೂಪಿಸಿರುವ ಪ್ರಕರಣಗಳು ಠಾಣೆ ಮೆಟ್ಟಿಲೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಪತ್ತೆ ಇಲ್ಲ ಪ್ರಕರಣ ದಾಖಲಾಗಿ ವಾರ ಕಳೆದರೂ ಜಿಲ್ಲಾಧಿಕಾರಿ ಹೆಸರಿನಲ್ಲಿ ಹಣ ಸುಲಿಗೆಗೆ ಸಂಚು ರೂಪಿಸಿದ್ದ ಅನಾಮಿಕ ಪತ್ತೆಯಾಗಿಲ್ಲ. ಸೈಬರ್ ಕ್ರೈಂ ಪೊಲೀಸರ ಸಹಕಾರದಲ್ಲಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರೂ ಇದುವರೆಗೆ ಆತನ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ.


    ವಾಟ್ಸ್‌ಆ್ಯಪ್ ಡಿಪಿಗಳಲ್ಲಿ ಅಧಿಕಾರಿಗಳು, ಸೆಲೆಬ್ರಿಟಿಗಳು ಸೇರಿ ಇನ್ನಿತರರ ಭಾವಚಿತ್ರ ಬಳಸಿ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸುಲಿಗೆಗೆ ವಂಚಕರು ಬಲೆ ಬೀಸುತ್ತಿರುತ್ತಾರೆ. ಇಂಥವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಇಂಥವರ ಬಲೆಗೆ ಬೀಳಬಾರದು. ಇಂಥ ಸಂದೇಶಗಳು ಹರಿದಾಡಿದರೆ ತಕ್ಷಣ ಪೊಲೀಸರಿಗೆ ದೂರು ನೀಡಬೇಕು.

    ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ

    ಜಿಲ್ಲಾಧಿಕಾರಿ ಭಾವಚಿತ್ರವನ್ನು ವಾಟ್ಸ್‌ಆ್ಯಪ್ ಡಿಪಿಯಲ್ಲಿ ಹಾಕಿಕೊಂಡು ಪೊಲೀಸರು ಸೇರಿ ಹಲವು ಸರ್ಕಾರಿ ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟು ಸಂದೇಶ ರವಾನಿಸಿ ವಂಚನೆ ಎಸಗುವ ಸಂಚು ರೂಪಿಸಿದ್ದ ಅಪರಿಚಿತನ ವಿರುದ್ಧ ಕ್ರಮಕೈಗೊಳ್ಳುವಂತೆ ವಿಶ್ವನಾಥಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
    ಅಭಿಷೇಕ್, ಜಿಲ್ಲಾಧಿಕಾರಿ ಆಪ್ತ ಸಹಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts