More

  ಉಡುಪಿ ಮೆಸ್ಕಾಂಗೆ ‘ಪವರ್​’ಮ್ಯಾನ್​ ‘ಶಾಕ್​’

  ಜಿಲ್ಲೆಯಲ್ಲಿ 483 ಲೈನ್​ಮೆನ್​ ಹುದ್ದೆ ಖಾಲಿ | ಕೆಲಸ ಮಾಡಲು ಜನರಿಲ್ಲ ಮಳೆಗಾಲದಲ್ಲಿ

  ಪ್ರಶಾಂತ ಭಾಗ್ವತ, ಉಡುಪಿ
  ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಉಡುಪಿ ಜಿಲ್ಲೆಯ ವಿದ್ಯುತ್​ ಇಲಾಖೆಗೆ ಈಗಲೇ ತಲೆಬಿಸಿ ಆರಂಭವಾಗಿದೆ. ವರ್ಷದಲ್ಲಿ 8 ತಿಂಗಳು ಅನೇಕ ಕೊರತೆಗಳ ನಡುವೆಯೂ ಹೇಗೋ ಕೆಲಸ ನಿಭಾಯಿಸುವ ಅಧಿಕಾರಿಗಳಿಗೆ ಈಗ ‘ಪವರ್​ಮ್ಯಾನ್​’ ಶಾಕ್​ ತಗುಲಿದೆ.

  ಜಿಲ್ಲೆಯಲ್ಲಿ ಶೇ.50ರಷ್ಟು ಲೈನ್​ಮೆನ್​ ಕೊರತೆ ಇದ್ದು, ಮಳೆಗಾಲದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಿಲು ಇಲಾಖೆಗೆ ತೊಡಕಾಗಲಿದೆ. ಪ್ರಸ್ತುತ 565 ಪವರ್​ಮ್ಯಾನ್​ ಕರ್ತವ್ಯ ನಿರ್ವಹಿಸುತ್ತಿದ್ದು, 483 ಹುದ್ದೆ ಖಾಲಿ ಇದೆ.!!!

  ಹೆಚ್ಚುವರಿ ಕೆಲಸ

  ಗುಡುಗು-ಸಿಡಿಲು ಸಹಿತ ಮಳೆ ಬಂತೆಂದರೆ ಸಣ್ಣ ಮಕ್ಕಳು ಹೆದರುವಂತೆಯೇ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಸ್ತುತ ಕೆಲಸದಲ್ಲಿರುವ ಪವರ್​ಮ್ಯಾನ್​ಗಳಿಗೂ ನಡುಕ ಹುಟ್ಟಿಸುತ್ತವೆ. ಭಾರಿ ಗಾಳಿಮಳೆ ಬಂದರೆ ಗಿಡ-ಮರಗಳು ಉರುಳಿ ಅಪಾರ ಸಂಖ್ಯೆಯಲ್ಲಿ ವಿದ್ಯುತ್​ ಕಂಬ ಹಾಗೂ ಟಿಸಿಗಳು ಧರೆಗುರುಳುತ್ತವೆ. ದಿನದ ಕತ್ತಲು ಕವಿಯುವುದರೊಳಗೆ ಸರಿಪಡಿಸಿ ಜನರಿಗೆ ರಾತ್ರಿ ವೇಳೆ ಕರೆಂಟ್​ ಕೊಡಲೇಬೇಕಾದ ‘ಒತ್ತಡ’ದಲ್ಲಿ ಕೆಲಸ ಮಾಡಬೇಕಿದೆ. ಹೀಗಾಗಿ ಸಿಬ್ಬಂದಿ ಕೊರತೆಯಿಂದ ಇರುವ ಲೈನ್​ಮೆನ್​ಗಳಿಗೆ ಅನಿವಾರ್ಯವಾಗಿ ಹೆಚ್ಚಿನ ಕೆಲಸ ಮಾಡಲೇಬೇಕಿದೆ.

  UDP-14-4A-Mescom
  ಮಳೆಯಿಂದಾಗಿ ಕೋಟದಲ್ಲಿ ವಿದ್ಯುತ್​ ಕಂಬ ಧರೆಗುರುಳಿದ್ದು, ಸರಿಪಡಿಸುತ್ತಿರುವ ಮೆಸ್ಕಾಂ ಸಿಬ್ಬಂದಿ.

  120 ಕಂಬಕ್ಕೆ ಹಾನಿ

  ಮೇ 14ರಂದು ಮಧ್ಯಾಹ್ನ ಜಿಲ್ಲೆಯಲ್ಲಿ ಒಂದೆರಡು ಗಂಟೆ ಸುರಿದ ಸಾಧಾರಣ ಗಾಳಿಮಳೆಗೆ ಗಿಡ-ಮರಗಳು ಉರುಳಿದ್ದರಿಂದ 120 ವಿದ್ಯುತ್​ ಕಂಬಗಳು ಹಾನಿಗೊಂಡಿದೆ. 7 ಟ್ರಾನ್ಸ್ ಫಾರ್ಮರ್​ ಕೆಟ್ಟು ಹೋಗಿದೆ. ಸುಮಾರು 1.3 ಕಿಮೀ ವ್ಯಾಪ್ತಿಯಲ್ಲಿ ತಂತಿಗಳು ತುಂಡಾಗಿ ಅಪಾರ ಹಾನಿಯೂ ಸಂಭವಿಸಿದೆ. ಇದೀಗ ಪವರ್​ಮ್ಯಾನ್​ಗಳು ಉರುಳಿರುವ ಕಂಬ ತೆರವು ಮಾಡಿ ಹೊಸ ಕಂಬ ಅಳವಡಿಸಿ, ತಂತಿ ಜೋಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

  138 ಗ್ಯಾಂಗ್​ಮನ್​

  ಮಳೆಗಾಲದಲ್ಲಿ ತೊಂದರೆ ಕೊಡಬಹುದಾದ ಒಣಗಿದ ಗಿಡ-ಮರಗಳ ಕಟಾವಿಗೆ ಹಾಗೂ ವಿದ್ಯುತ್​ ತಂತಿಗಳ ಮೇಲೆ ಎರಗಿದ ಮರದ ರೆಂಬೆ-ಕೊಂಬೆ ಕತ್ತರಿಸಲು ಉಡುಪಿ ಮೆಸ್ಕಾಂಗೆ 138 ಗ್ಯಾಂಗ್​ಮನ್​ರನ್ನು ನೀಡಲಾಗಿದೆ. ಅವರೆಲ್ಲ ಇದೀಗ ನಗರಸಭೆಯ ವ್ಯಾಪ್ತಿಯ ಪ್ರಮುಖ ರಸ್ತೆ, ವಿವಿಧ ಸರ್ಕಾರಿ ಕಚೇರಿ ಸುತ್ತಮುತ್ತ ಹಾಗೂ ಬೃಹತ್​ ವಸತಿ ಸಮುಚ್ಚಯ ಇರುವ ಕಡೆಗಳಲ್ಲಿ ವಿದ್ಯುತ್​ ತಂತಿಗೆ ತಾಗಿರುವ ರೆಂಬೆಗಳ ಕಟಾವಿನಲ್ಲಿ ನಿರತರಾಗಿದ್ದಾರೆ.

  ನಿರ್ವಹಣೆಗೆ ತೊಡಕು

  ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪವರ್​ಮ್ಯಾನ್​ಗಳ ಕೊರತೆ ಇದೆ. ಅವರ ಭರ್ತಿ ಕಾರ್ಯ ಸರ್ಕಾರದ ಮಟ್ಟದಲ್ಲೇ ಆಗಬೇಕಿದ್ದರಿಂದ ಉಡುಪಿ ಜಿಲ್ಲೆಯೂ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಜಿಲ್ಲೆಗಳಲ್ಲೂ ಸಹ ಸಿಬ್ಬಂದಿ ಕೊರತೆ ಇದೆ. ಸರ್ಕಾರ ‘ಗ್ಯಾರಂಟಿ’ ಯೋಜನೆ ಮೂಲಕ 200 ಯುನಿಟ್​ವರೆಗೆ ಉಚಿತ ವಿದ್ಯುತ್​ ನೀಡಿದ್ದರಿಂದ ಲಾನುಭವಿಗಳು ಸಂತಸದಲ್ಲಿದ್ದಾರೆ. ಆದರೆ, ಸಮರ್ಪಕ ನಿರ್ವಹಣೆಗೆ ಸಿಬ್ಬಂದಿಗಳಿಲ್ಲದೆ ವಿದ್ಯುತ್​ ಇಲಾಖೆ ಪರದಾಡುತ್ತಿದೆ.

  ಹೆಬ್ರಿಯಲ್ಲಿ ವಿದ್ಯುತ್​ ತಂತಿಯ ಮೇಲೆ ಮರ ಉರುಳಿರುವುದು.
  ಮಳೆಯಿಂದಾಗಿ ಕೋಟದಲ್ಲಿ ವಿದ್ಯುತ್​ ಕಂಬ ಧರೆಗುರುಳಿದ್ದು, ಸರಿಪಡಿಸುತ್ತಿರುವ ಮೆಸ್ಕಾಂ ಸಿಬ್ಬಂದಿ.

  ಒಂದೇ ದಿನ 12 ಮನೆಗಳಿಗೆ ಹಾನಿ

  ಮೇ 14ರಂದು ಸುರಿದ ಮಳೆಗೆ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕಿನ 12 ಕುಟುಂಬಗಳ ವಾಸ್ತವ್ಯದ ಮನೆಗೆ ಹಾನಿಯಾಗಿದೆ. ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದ ಬಾಬಿ ಹಾಗೂ ಗುಲಾಬಿ ಎನ್​. ಶೆಟ್ಟಿ, 52 ಹೇರೂರು ಗ್ರಾಮದ ಸುನೀಲ್​ ಡಿಸೋಜ ಅವರ ಮನೆ ಭಾಗಶ: ಹಾನಿಯಾಗಿದೆ. ಕುಂದಾಪುರ ತಾಲೂಕಿನ ಹೊಸಂಗಡಿಯ ಪ್ರೇಮಾ ಆಚಾರಿ, ಮೊಳಹಳ್ಳಿಯ ನಾಗು ಶೆಟ್ಟಿ, ಕಾಡ್ತಿ, ರಾಜು, ಹಾಗೂ ಬೆಳ್ಳಿ ಅವರ ಮನೆ ಹಾನಿಯಾಗಿದೆ. ಸಿದ್ದಾಪುರ ಗ್ರಾಮದ ಪ್ರಭಾಕರ ಭಟ್​, ರಾಗವೇಂದ್ರ ಭಟ್​, ಶಾರದಾ ಭಟ್​, ಉಳ್ಳೂರಿನ ಶಂಕರ ಮಡಿವಾಳ ಅವರ ಮನ ಭಾಗಶ: ಹಾನಿಯಾಗಿದ್ದು, ಕನಿಷ್ಠ 10 ಸಾವಿರದಿಂದ ಗರಿಷ್ಠ 75 ಸಾವಿರ ರೂ.ವರೆಗೆ ಹಾನಿಯಾಗಿದೆ. ಜಿಲ್ಲೆಯ ಹಲವೆಡೆ ವಿದ್ಯುತ್​ ತಂತಿ ಹಾಗೂ ಕಂಬಗಳು ಹಾನಿಗೊಂಡಿದ್ದಾಗಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

  ಉಡುಪಿ ಜಿಲ್ಲೆಯಲ್ಲಿ ಲೈನ್​ಮೆನ್​ಗಳ ಕೊರತೆ ಇರುವ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಮುಂಗಾರು ಪೂರ್ವ ಮಳೆ ಆರಂಭಗೊಂಡಿದ್ದರಿಂದ ಜಿಲ್ಲೆಯಲ್ಲಿ ಅಪಾಯ ತರಬಹುದಾದ ಗಿಡ&ಮರಗಳ ಟೊಂಗೆ ಕಟಾವು ಕಾರ್ಯ ಆರಂಭಿಸಲಾಗಿದೆ. ಈ ಕೆಲಸಕ್ಕಾಗಿ 138 ಗ್ಯಾಂಗ್​ಮನ್​ಗಳನ್ನು ಜಿಲ್ಲೆಗೆ ನೀಡಲಾಗಿದೆ.

  ದಿನೇಶ್​ ಉಪಾಧ್ಯ.

  ಅಧೀಕ್ಷಕ ಇಂಜಿನಿಯರ್​. ಮೆಸ್ಕಾಂ, ಉಡುಪಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts