ನ್ಯೂಸ್

ಐದನೇ ಬಾರಿ ಎಂಪಿ ಸಿಎಂ ಸ್ಥಾನದತ್ತ ಕಣ್ಣು: ಪರೋಕ್ಷ ಸಂದೇಶ ರವಾನಿಸಿದ ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್: ಈಗಷ್ಟೇ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿರುವ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಊಹಾಪೋಹಗಳು ಶುರುವಾಗಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಮುಖ್ಯಮಂತ್ರಿ ಸ್ಥಾನಗಳಿಗೆ ಹೊಸ ಮುಖಗಳನ್ನೇ ಆಯ್ಕೆ ಮಾಡುವ ಸುಳಿವನ್ನು ಬಿಜೆಪಿ ಉನ್ನತ ನಾಯಕರು ನೀಡಿದ್ದಾರೆ. ಹೀಗಿದ್ದರೂ, ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೆ ಐದನೇ ಬಾರಿ ಸಿಎಂ ಹುದ್ದೆ ಅಲಂಕರಿಸುವ ಕನಸನ್ನೇನೂ ತೊರೆದಿಲ್ಲ ಎನ್ನಲಾಗುತ್ತಿದೆ. ಇಂತಹ ಅಭಿಲಾಷೆ ಕುರಿತ ಸುಳಿವನ್ನು ಅವರು ಪರೋಕ್ಷವಾಗಿ ಬುಧವಾರ ಇಲ್ಲಿ ಪ್ರದರ್ಶಿಸಿದ್ದಾರೆ. ಈ ಮೂಲಕ ಪಕ್ಷದ ಉನ್ನತ ನಾಯಕತ್ವಕ್ಕೂ ಸಂದೇಶವನ್ನು ರವಾನಿಸಿದ್ದಾರೆ.

ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದಲ್ಲಿ "ಲಾಡ್ಲಿ ಬೆಹನಾ" ರೀತಿಯ ಯೋಜನೆಗಳ ಮೂಲಕ ತಮ್ಮ ಪಕ್ಷವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ್ದಾರೆ ಎಂದೇ ಭಾವಿಸಲಾಗಿದೆ. ಆದರೆ, ಪಕ್ಷವು ಸಿಎಂ ಸ್ಥಾನಕ್ಕೆ ಹೊಸ ಮುಖದ ಹುಡುಕಾಟದಲ್ಲಿದೆ ಎನ್ನಲಾಗಿದೆ.

ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿಯ ಅಂಗವಾಗಿ ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಚೌಹಾಣ್, "ನಾನು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಅವರು ತೋರಿಸಿದ ಹಾದಿಯಲ್ಲಿ ಬಿಜೆಪಿ ಸರ್ಕಾರ ಮುನ್ನಡೆಯುತ್ತಿದೆ. ಪ್ರಧಾನಿ ಮೋದಿಯವರು, ನಾವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ" ಎಂದರು.

ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದಾಗಿನಿಂದಲೂ ಶಿವರಾಜ್ ಸಿಂಗ್ ಚೌಹಾಣ್ ತಾವು ಪಕ್ಷದ ಅಡಿಯಾಳು ಎಂದು ಒತ್ತಿ ಹೇಳುತ್ತಲೇ ಬಂದಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಂತರ ದೆಹಲಿಯಿಂದ ದೂರವೇ ಉಳಿದಿದ್ದಾರೆ. ಬಿಜೆಪಿ ಹೊಸ ಮುಖ್ಯಮಂತ್ರಿ ಮುಖವನ್ನು ಪರಿಗಣಿಸುತ್ತಿದ್ದರೂ, ಸಿಎಂ ಸ್ಥಾನಕ್ಕೆ ಆಕಾಂಕ್ಷಿಯಾಗಿರುವುದನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.

ಲಾಡ್ಲಿ ಬೆಹನಾ ಪ್ರಸ್ತಾಪ:

ಬಿಜೆಪಿಗೆ ಚುನಾವಣೆ ಗೆಲ್ಲುವಲ್ಲಿ ತಮ್ಮ ಸರ್ಕಾರದ ಲಾಡ್ಲಿ ಬೆಹನಾದಂತಹ ಕಲ್ಯಾಣ ಯೋಜನೆಗಳು ಹೇಗೆ ಪ್ರಮುಖ ಪಾತ್ರ ವಹಿಸಿದವು ಎಂಬುದನ್ನು ಪಕ್ಷದ ನಾಯಕತ್ವಕ್ಕೆ ನೆನಪಿಸುವ ನಿಟ್ಟಿನಲ್ಲಿ ಪ್ರಯತ್ನ ಇದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಹೃದಯಭಾಗದ ರಾಜ್ಯಗಳಿಗೆ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವಾಗ ಅನುಭವಿಗಳ ಬದಲಿಗೆ ಸಂಪೂರ್ಣವಾಗಿ ಹೊಸ ಮುಖಗಳನ್ನು ಪರಿಗಣಿಸುವ ಬಗ್ಗೆ ಬಿಜೆಪಿ ಮಾತನಾಡುತ್ತಿರುವ ಸಮಯದಲ್ಲಿ ಶಿವರಾಜ್​ ಸಿಂಗ್ ಇಂತಹ ಸುಳಿವು ನೀಡಿರುವುದು ಕುತೂಹಲ ಗರಿಗೆದರಿಸಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದಾಗಿನಿಂದ (230ರ ಪೈಕಿ ಬಿಜೆಪಿಗೆ 163 ಸ್ಥಾನಗಳಲ್ಲಿ ಗೆಲುವು) ಶಿವರಾಜ್​ ಸಿಂಗ್ ಅವರು ತಾವು ಪಕ್ಷದ ಅಡಿಯಾಳಾಗಿದ್ದು, ಯಾವುದೇ ರೇಸ್​ನಲ್ಲಿಲ್ಲ ಎಂದೇ ಬಹಿರಂಗವಾಗಿ ಹೇಳಿಕೊಂಡುಬಂದಿದ್ದಾರೆ.

ಮಂಗಳವಾರ ಕೂಡ ಸುದ್ದಿಗಾರರ ಜತೆಗಿನ ಸಂವಾದದಲ್ಲಿ ಅವರು, ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ 29 ಲೋಕಸಭೆ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವಂತೆ ಮಾಡುವುದು ತಮ್ಮ ಮುಂದಿನ ಗುರಿಯಾಗಿದೆ ಎಂದು ಹೇಳಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ 29 ಸ್ಥಾನಗಳಲ್ಲಿ ಬಿಜೆಪಿ 28 ಸ್ಥಾನಗಳನ್ನು ಗೆದ್ದುಕೊಂಡಿತ್ತು, ಒಂದರಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ದೆಹಲಿಯಿಂದ ದೂರ:

"ನಾನು ದೆಹಲಿಗೆ ಹೋಗುತ್ತಿಲ್ಲ, ನಾಳೆ ನಾನು ಛಿಂದ್ವಾರಾಕ್ಕೆ ಹೋಗುತ್ತೇನೆ, ಅಲ್ಲಿ ನಾವು ಎಲ್ಲಾ 7 ವಿಧಾನಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ನನ್ನ ಬಳಿ ಒಂದೇ ಒಂದು ಗುರಿ ಇದೆ. ಲೋಕಸಭೆಯಲ್ಲಿ ಮಧ್ಯಪ್ರದೇಶದ ಎಲ್ಲ 29 ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು. ಈ ಹಾರವನ್ನು ನಾವು ಪ್ರಧಾನಿ ಮೋದಿಯವರಿಗೆ ಸಿದ್ಧಪಡಿಸಲು ಬಯಸುತ್ತೇವೆ, 29 ಕಮಲಗಳಿಂದ ಮಾಡಲಾಗಿರುವ ಈ ಹಾರವನ್ನು ಅವರು ಮತ್ತೊಮ್ಮೆ ಪ್ರಧಾನಿಯಾದಾಗ ನಾವು ಅರ್ಪಿಸುತ್ತೇವೆ " ಎಂದು ಅವರು ಮಂಗಳವಾರ ಹೇಳಿದರು.

64 ವರ್ಷ ವಯಸ್ಸಿನ ಶಿವರಾಜ್​ ಅವರ ನಡೆಗಳು ಗೆಲುವಿನ ನಂತರ ಅಧಿಕಾರಕ್ಕಾಗಿ ತಾವು ಯಾವುದೇ ಚಟುವಟಿಕೆ ಮಾಡುತ್ತಿಲ್ಲ ಎಂಬುದನ್ನು ಬಿಂಬಿಸುವಂತಿವೆ. ಭೋಪಾಲ್‌ನಲ್ಲಿ ಎರಡು ರಾತ್ರಿ ಆಶ್ರಯ ತಾಣಗಳಿಗೆ ಭೇಟಿ ನೀಡಿದ ಅವರು, ಚಳಿಗಾಲದ ಮುಂಚಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನೈಟ್ ಶೆಲ್ಟರ್​ನಲ್ಲಿ ಆಹಾರದ ರುಚಿ ನೋಡಿದರು. ಭೋಪಾಲ್‌ನಲ್ಲಿ ವಸತಿ ಪ್ರದೇಶಕ್ಕೆ ಹೋಗಿ 'ಲಾಡ್ಲಿ ಬೆಹನಾ' ಫಲಾನುಭವಿಗಳ ಗುಂಪನ್ನು ಭೇಟಿ ಮಾಡಿದರು. ಪತ್ನಿ ಜತೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವುದು, ಜನರೊಂದಿಗೆ ಮಾತನಾಡುವ ಅವರ ವಿಡಿಯೋಗಳು ವೈರಲ್​ ಆಗಿವೆ.