More

    ರಾಹುಲ್​ ಗಾಂಧಿ- ಪ್ರಣವ್​ ಮುಖರ್ಜಿ ನಡುವಿನ ಅಸಮಾಧಾನ: ಮಗಳು ಬರೆದ ಪುಸ್ತಕದಲ್ಲಿವೆ ಕುತೂಹಲಕಾರಿ ಸಂಗತಿಗಳು

    ನವದೆಹಲಿ: ರಾಹುಲ್​ ಗಾಂಧಿ ಹಾಗೂ ಪ್ರಣವ್​ ಮುಖರ್ಜಿ ಅವರಿಬ್ಬರೂ ಕಾಂಗ್ರೆಸ್​ನ ಹಿರಿಯ ನಾಯಕರು. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮೊಮ್ಮಗ ಹಾಗೂ ರಾಜೀವ್​ ಗಾಂಧಿ ಅವರ ಪುತ್ರ ರಾಹುಲ್​ ಗಾಂಧಿ ಅವರೂ ಪ್ರಧಾನಿ ಸ್ಥಾನದ ಆಕಾಂಕ್ಷಿ. ಪ್ರಣಬ್ ಮುಖರ್ಜಿ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ನಂತರ ರಾಷ್ಟ್ರಪತಿ ಹುದ್ದೆ ಅಲಂಕರಿಸಿದವರು.

    ಪ್ರಣಬ್ ಮುಖರ್ಜಿ ಅವರು ರಾಹುಲ್ ಗಾಂಧಿ ಅವರ ಬಗೆಗೆ ಕೆಲ ವಿಚಾರಗಳಲ್ಲಿ ಸಾಕಷ್ಟು ಅತೃಪ್ತಿ, ಅಸಮಾಧಾನ ಹೊಂದಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಕಂಡ ನಂತರ ರಾಹುಲ್ ಗಾಂಧಿ ಅವರು ಸಂಸತ್ತಿಗೆ ಆಗಾಗ್ಗೆ ಗೈರುಹಾಜರಾಗಿದ್ದರು. ಈ ವಿಷಯದಲ್ಲಿ ಪ್ರಣವ್​ ಅವರು ಸಾಕಷ್ಟು ಅಸಮಾಧಾನಗೊಂಡಿದ್ದರು.

    ಈ ವಿಷಯವನ್ನು ಪ್ರಣವ್​ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರೇ ಬಹಿರಂಗಪಡಿಸಿದ್ದಾರೆ. ತಮ್ಮ ದಿವಂಗತ ತಂದೆ ಕುರಿತ ಮುಂಬರುವ ಪುಸ್ತಕದಲ್ಲಿ ಇಂತಹ ಅನೇಕ ಕುತೂಹಲಕಾರಿ ಸಂಗತಿಗಳನ್ನು ಅವರು ಬಿಚ್ಚಿಟ್ಟಿದ್ದಾರೆ.

    ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರಂತಹ ಅಪರಾಧಿ ನಾಯಕರನ್ನು ಅನರ್ಹತೆಯಿಂದ.ರಕ್ಷಿಸಲು 2013ರಲ್ಲಿ ಅಂದಿನ ಯುಪಿಎ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಕಸದ ಬುಟ್ಟಿಗೆ ಹಾಕಿದ್ದರ ಬಗ್ಗೆಯೂ ತಮ್ಮ ತಂದೆ ಅಸಮಾಧಾನಗೊಂಡಿದ್ದರು ಎಂದೂ ಶರ್ಮಿಷ್ಠಾ ಮುಖರ್ಜಿಹೇಳಿದ್ದಾರೆ.

    ಕಾಂಗ್ರೆಸ್ ವಕ್ತಾರರೂ ಆಗಿರುವ ಶರ್ಮಿಷ್ಠಾ ಅವರು ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ, ತಮ್ಮ ಮುಂಬರುವ ಪುಸ್ತಕ ‘ಇನ್ ಪ್ರಣಬ್, ಮೈ ಫಾದರ್: ಎ ಡಾಟರ್ ರಿಮೆಂಬರ್ಸ್’ ಬಗ್ಗೆ ಮಾತನಾಡಿದ್ದಾರೆ, ಅವರ ತಂದೆಯ ಜೀವನದಲ್ಲಿ ನಡೆದ ಮಹತ್ವ, ಕುತೂಹಲಕಾರಿ ಘಟನೆಗಳು ಮತ್ತು ಕೆಲವು ವೈಯಕ್ತಿಕ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ.

    ರಾಹುಲ್ ಗಾಂಧಿಯವರ ಮಾತುಗಳು ರಾಜಕೀಯವಾಗಿ ಅಪಕ್ವವಾಗಿವೆ ಎಂದು ಆಕೆಯ ತಂದೆ ಹೇಳುತ್ತಿದ್ದರು ಎಂದೂ ಶರ್ಮಿಷ್ಠಾ ಹೇಳಿದ್ದಾರೆ.

    ತಮ್ಮನ್ನು ಪ್ರಧಾನಿಯನ್ನಾಗಿ ಮಾಡುವ ಬಗ್ಗೆ ಸೋನಿಯಾ ಗಾಂಧಿ ಅವರಿಂದ ತಮಗೆ ಯಾವುದೇ ನಿರೀಕ್ಷೆ ಇರಲಿಲ್ಲ ಎಂದು ತಮ್ಮ ತಂದೆ ಪತ್ರಕರ್ತರೊಬ್ಬರಿಗೆ ಸಂದರ್ಶನವೊಂದರಲ್ಲಿ ಹೇಳಿದ್ದರು ಎಂದೂ ಅವರು ತಿಳಿಸಿದ್ದಾರೆ.

    “2004 ರಲ್ಲಿ, ಸೋನಿಯಾ ಗಾಂಧಿ ಅವರು ಪ್ರಧಾನಿಯಾಗುವ ತಮ್ಮ ಅವಕಾಶವನ್ನು ತ್ಯಜಿಸಿದ ನಂತರ, ಮಾಧ್ಯಮಗಳಲ್ಲಿ ಪ್ರಧಾನಿ ಯಾರಾಗುತ್ತಾರೆ ಎಂಬ ಬಗ್ಗೆ ಊಹಾಪೋಹಗಳು ಇದ್ದವು. ನನ್ನ ತಂದೆ ಮತ್ತು ಮನಮೋಹನ್ ಸಿಂಗ್ ಅವರ ಹೆಸರುಗಳು ಹರಿದಾಡುತ್ತಿದ್ದವು. ನಾನು ಅವರನ್ನು ನೀವು ಪ್ರಧಾನಿಯಾಗಬಹುದೇ ಎಂದು ಉತ್ಸಾಹದಿಂದ ಕೇಳಿದ್ದೆ. ಆದರೆ, ಅವರು ಬೇಡ ಎಂದಿದ್ದರು. ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ ಎಂದೂ ಹೇಳಿದ್ದರು” ಎಂದು ಶರ್ಮಿಷ್ಠಾ ಸ್ಮರಿಸಿದ್ದಾರೆ.

    2009ರ ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮೊದಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ರಾಹುಲ್ ಗಾಂಧಿ ಅವರು ತಾವು ಸಮ್ಮಿಶ್ರ ಸರ್ಕಾರದ ಪರವಾಗಿಲ್ಲ ಎಂದು ಹೇಳಿದ ಘಟನೆಯನ್ನು ತಮ್ಮ ತಂದೆ ತಮ್ಮ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

    “ಅವರು (ರಾಹುಲ್ ಗಾಂಧಿ) ತಮ್ಮ ಆಲೋಚನೆಗಳನ್ನು ಸುಸಂಬದ್ಧವಾಗಿ ಹೇಳಬೇಕೆಂದು ಬಾಬಾ (ಪ್ರಣಬ್ ಮುಖರ್ಜಿ) ಹೇಳಿದ್ದರು. ಪ್ರಣವ್​ ಅವರನ್ನು ಭೇಟಿಯಾಗುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. 2004ರಿಂದ 2014ರ ಯುಪಿಎ ಆಡಳಿತದಲ್ಲಿ ಈ ಇಬ್ಬರೂ ನಾಯಕರ ನಡುವೆ ಹೆಚ್ಚು ಸಂವಹನ ಇರಲಿಲ್ಲ” ಎಂದು ಅವರು ವಿವರಿಸಿದರು.

    ರಾಹುಲ್ ಗಾಂಧಿ ಅವರ ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆಯ ಬಗ್ಗೆ ತಮ್ಮ ತಂದೆ ವ್ಯಂಗ್ಯವಾಡಿದ ಘಟನೆಯನ್ನು ಕೂಡ ನೆನಪಿಸಿಕೊಂಡಿದ್ದಾಗಿ ಶರ್ಮಿಷ್ಠಾ ಹೇಳಿದ್ದಾರೆ.

    “ರಾಹುಲ್ ಗಾಂಧಿ ಅವರು ಬೆಳಗ್ಗೆ ಮೊಘಲ್ ಗಾರ್ಡನ್​ನಲ್ಲಿ ವಾಕಿಂಗ್ ಮಾಡುವಾಗ ಬಾಬಾ ಅವರನ್ನು ನೋಡಲು ಬಂದರು, ನಡೆಯುವಾಗ ಅಥವಾ ಪೂಜೆ ಮಾಡುವಾಗ ತೊಂದರೆಯಾಗುವುದು ಬಾಬಾಗೆ ಇಷ್ಟವಿರಲಿಲ್ಲ. ಆದರೂ ಬಾಬಾ ಅವರು ರಾಹುಲ್​ ಅವರನ್ನು ಭೇಟಿಯಾದರು. ಆದರೆ, ನಂತರ ನನಗೆ ತಿಳಿದಿದ್ದೇನೆಂದರೆ, ರಾಹುಲ್ ಗಾಂಧಿ ಅವರು ಬಾಬಾ ಅವರನ್ನು ಭೇಟಿಯಾಗುವುದು ಸಂಜೆಗೆ ನಿಗದಿಯಾಗಿತ್ತು. ನಾನು ಈ ಬಗ್ಗೆ ಬಾಬಾ ಅವರನ್ನು ಕೇಳಿದಾಗ ಅವರು ಸುಮ್ಮನಾಗಲಿಲ್ಲ, ರಾಹುಲ್ ಗಾಂಧಿ ಅವರ ಕಚೇರಿಯಲ್ಲಿ ಬೆಳಗ್ಗೆ ಮತ್ತು ಸಂಜೆಯ ನಡುವೆ ವ್ಯತ್ಯಾಸವಿಲ್ಲದಿದ್ದರೆ ಅವರು ಪ್ರಧಾನಿಯಾಗುವುದು ಹೇಗೆ ಎಂದು ವ್ಯಂಗ್ಯವಾಡಿದರು” ಎಂದು ಶರ್ಮಿಷ್ಠಾ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.

    10 ಬಿಜೆಪಿ ಸಂಸದರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts