ಈ ನಮ್ಮ ಭಾರತ ದೇಶವು ಉಳಿಸಿ, ಬೆಳೆಸಿ, ಹಿಂದೂ ಧರ್ಮದ ಅಡಿಪಾಯದಲ್ಲಿ ಬೆಳೆಯುವುದಕ್ಕೆ ಕಾರಣ ದಶರಥ ಪುತ್ರನಾಗಿ ಭಗವಾನ್ ಶ್ರೀರಾಮಚಂದ್ರನು ಜನಿಸಿ ಈ ಮಹಾಭಾರತ ಖಂಡವನ್ನು 11 ಸಾವಿರ ವರ್ಷಗಳ ಕಾಲ ರಾಜ್ಯಭಾರವನ್ನು ಮಾಡಿದ್ದು. ಪ್ರಜೆಗಳ ಕ್ಷೇಮಕ್ಕಾಗಿ ತನ್ನನ್ನೇ ಮುಡುಪಾಗಿಟ್ಟುಕೊಂಡು, ರಾಕ್ಷಸರು ಕೊಟ್ಟ ತೊಂದರೆಗಳನ್ನು, ಉಪಟಳಗಳನ್ನು ತೊಡೆದು ಈ ರಾಷ್ಟ್ರವನ್ನು ಕಟ್ಟಿದ್ದಾನೆ. ಹಾಗಾಗಿ, ಈ ರಾಷ್ಟ್ರಕ್ಕೆ ಧರ್ಮವೇ ಶ್ರೀರಕ್ಷೆ ಆಗಿದ್ದು, ಧರ್ಮಮಾರ್ಗವೇ ಕಾಪಾಡಲಿದೆ.
ಶೋಭಕೃತ್ ಸಂವತ್ಸರದ, ಶರದ್ ಋತುವಿನ ಆಶ್ವೀಜಮಾಸ ಶುಕ್ಲಪಕ್ಷದ ಪೌರ್ಣಿಮೆಯಾದ ಅಕ್ಟೋಬರ್ 28ರಂದು (ಶನಿವಾರ) ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತಿದ್ದು, ಭಾರತದಲ್ಲಿ ಗೋಚರವಿದೆ. ರಾತ್ರಿ 01-04ಕ್ಕೆ ಸ್ಪರ್ಶಕಾಲವಿದ್ದು, ರಾತ್ರಿ 01-44ಕ್ಕೆ ಗ್ರಹಣ ಮಧ್ಯಕಾಲ. ರಾತ್ರಿ 02-24ಕ್ಕೆ ಮೋಕ್ಷಕಾಲ ಸಂಭವಿಸಲಿದೆ. ರಾತ್ರಿ 11.31ಕ್ಕೆ ಗ್ರಹಣದ ವೇದಗಳು ಆರಂಭಗೊಳ್ಳುತ್ತದೆ.
ನವದೆಹಲಿ, ಮುಂಬೈ, ಬೆಂಗಳೂರು, ಕೊಲ್ಕತ್ತ, ಚೆನ್ನೈ, ಅಹಮದಾಬಾದ್, ವಾರಾಣಸಿ, ಮಥುರಾ, ಪುಣೆ, ಸೂರತ್, ಕಾನಪುರ, ವಿಶಾಖಪಟ್ಟಣಂ, ಪಾಟ್ನಾ, ಊಟಿ, ಚಂಡೀಗಢ, ಇಂಫಾಲ್, ಇಟಾನಗರ, ಕೊಹಿಮಾ- ಈ ಎಲ್ಲ ನಗರಗಳಲ್ಲಿ ಗ್ರಹಣ ಗೋಚರಿಸಲಿದೆ. ಇದಲ್ಲದೆ, ಶ್ರೀಲಂಕಾ, ಬಾಂಗ್ಲಾದೇಶ, ಚೀನಾ ಸೇರಿ ಹಲವು ದೇಶಗಳಲ್ಲಿ ಸಹ ಈ ಗ್ರಹಣ ಗೋಚರ ಆಗಲಿದೆ.
ಗ್ರಹಣಕಾಲದಲ್ಲಿ ವಿಶೇಷ ಪೂಜೆ ಮಾಡುವುದು, ಪಿತೃಗಳಿಗೆ ತಿಲತರ್ಪಣ, ಜಲತರ್ಪಣ ನೀಡುವುದು ಮನುಷ್ಯನ ಆದ್ಯಕರ್ತವ್ಯವಾಗಿರುತ್ತದೆ. ಗ್ರಹಣಕಾಲದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು. ದೇವರ ಉಪಾಸನೆಯಲ್ಲಿದ್ದು, ಮಂತ್ರಸಿದ್ಧಿಯನ್ನು ಮಾಡಿಕೊಳ್ಳಬೇಕು. ಓಂಕಾರ ಜಪ, ಶಿವ ಜಪ ಅಥವಾ ಇಷ್ಟದೇವರ ಜಪ ಮಾಡಿದರೆ ಮನುಷ್ಯನಿಗೆ ಅದರಿಂದ ಬಹಳ ಉಪಯೋಗವಾಗಿ, ದೇವಮಾರ್ಗವು ಒದಗಿಬರುತ್ತದೆ. ತುಂಬು ಗರ್ಭೀಣಿಯರು, ಚಿಕ್ಕಮಕ್ಕಳು, ವಯಸ್ಸಾದವರು ಗ್ರಹಣವನ್ನು ವೀಕ್ಷಿಸಬಾರದು.
ಭಯಭೀತಿ ಬೇಡ: ಭಾರತ ರಾಷ್ಟ್ರದ 140 ಕೋಟಿ ಪ್ರಜೆಗಳು ಗ್ರಹಣಕ್ಕಾಗಿ ಯಾವುದೇ ಭೀತಿಯನ್ನು ಹೊಂದುವುದು ಬೇಡ. ಗ್ರಹಣ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರ ಆಚರಣೆ ನಮ್ಮ ಕರ್ತವ್ಯವಾಗಿರಲಿ. ಈ ಗ್ರಹಣವು ಅಶ್ವಿನಿ ಮತ್ತು ಭರಣಿ ನಕ್ಷತ್ರದಲ್ಲಿ ಸಂಭವಿಸುವುದರಿಂದ ಆ ನಕ್ಷತ್ರದವರು ಗೃಹಶಾಂತಿಯನ್ನು ಮಾಡಿದರೆ, ಅವರ ಶರೀರವು ಸದೃಢವಾಗಿದ್ದು, ಮಾಡುವ ಕೆಲಸಗಳಲ್ಲಿ ಅವರು ಯಶವನ್ನು ಕಾಣುತ್ತಾರೆ. ಶಾಸ್ತ್ರರೀತಿಯಲ್ಲಿ ಗ್ರಹಣವಾಗುವುದರಿಂದ ಮನುಷ್ಯನು ಯಾವುದೇ ತೊಂದರೆ, ಭೀತಿಗಳಿಗೆ ಹೆದರಬೇಕಾಗಿಲ್ಲ. ಹಿಂದೂಧರ್ಮದಲ್ಲಿ 33 ಸಾವಿರ ಕೋಟಿ ದೇವತೆಗಳಿದ್ದು, ನಮ್ಮನ್ನು ರಕ್ಷಿಸಲು ಎಲ್ಲರೂ, ನಾವು ಮಾಡುವ ಪೂಜೆಯನ್ನು ಸ್ವೀಕರಿಸಿ ಶುಭಫಲವನ್ನೇ ನೀಡುತ್ತಾರೆ.
ಎಲ್ಲರಿಗೂ ಗೊತ್ತಿರುವಂತೆ, ಪೌರ್ಣಿಮೆಯಲ್ಲಿ, ಅಮಾವಾಸ್ಯೆಯಲ್ಲಿ ಸಮುದ್ರಗಳು ಉಕ್ಕಿ ಹರಿಯುತ್ತವೆ. ಗ್ರಹಣಕಾಲದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿರುತ್ತದೆ. ವಿಶೇಷವಾಗಿ ಆಯಾ ಜನರ ಪಾಪ-ಪುಣ್ಯದ ಫಲದಲ್ಲಿ ಗ್ರಹಣಗಳು ನಿಷ್ಕರ್ಷೆ ಮಾಡುವುದು ವಾಡಿಕೆ ಆಗಿರುತ್ತದೆ. ನಮ್ಮ ದೇಶವು ಚೆನ್ನಾಗಿದ್ದರೆ, ನಾವೆಲ್ಲರೂ ಚೆನ್ನಾಗಿರುತ್ತೇವೆ. ದೇಶಕ್ಕೆ ಆಪತ್ತು ಬಂದಾಗ ಮನುಷ್ಯರನ್ನು ರಕ್ಷಿಸಲು ದೇವರೇ ಅವತರಿಸಿ ಬರಬೇಕೆಂಬ ನಿಯಮವಿದೆ. ಆದ್ದರಿಂದ, ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳಲು ಹಿಂದೂ ಧರ್ಮದಲ್ಲಿ ಹೇಳಿರುವ ಪೂಜೆಪುನಸ್ಕಾರ, ಜಪತಪಗಳನ್ನು ಮಾಡಿದರೆ ಮೇಷದಿಂದ ಮೀನರಾಶಿಯವರೆಗಿನ ಯಾರೂ ಭಯ ಪಡುವ ಅಗತ್ಯವೇ ಇಲ್ಲ. ಮನುಷ್ಯನಿಗೆ ಬೇಕಿರುವುದು ಸಮಾಧಾನ, ಶಾಂತಿ, ದೃಢವಾದ ಭಕ್ತಿ, ಸರಿಯಾದ ಗುರುವಿನ ಮಾರ್ಗದರ್ಶನ. ಭಕ್ತರು ಗುರುವಿನಲ್ಲಿ ಶರಣು ಹೋಗಿ, ಭಕ್ತಿಯಿಂದ ಅವರ ಮಾತನ್ನು ಅನುಸರಿಸಿದರೆ ಕೇಡು ಹತ್ತಿರವೂ ಸುಳಿಯುವುದಿಲ್ಲ.
ಈ ಹಿಂದೆ ಕೂಡ ಮೂರು ಗ್ರಹಣಗಳು ನಮ್ಮ ದೇಶವನ್ನು ಬಿಟ್ಟು ಅಮೆರಿಕ, ಆಸ್ಟ್ರೇಲಿಯಾ, ರಷ್ಯಾ, ನ್ಯೂಜಿಲ್ಯಾಂಡ್ ಸೇರಿ ಹಲವು ದೇಶಗಳಲ್ಲಿ ಗೋಚರವಾಗಿದ್ದವು. ಇದರ ಪರಿಣಾಮಗಳು ನಮಗೆ ಗೊತ್ತಿದೆ. ರಷ್ಯಾದ ಯುದ್ಧ, ಅಪ್ಘಾನಿಸ್ತಾನದ ಬೆಳವಣಿಗೆಗಳನ್ನು ನೋಡಿದ್ದೇವೆ. ಇವೆಲ್ಲ ಗ್ರಹಣದ ಪರಿಣಾಮಗಳೇ. ಯುದ್ಧಕಲಹಗಳು ಸಂಭವಿಸಿದವು. 20-04-2023, 05-05-2023 ಮತ್ತು 14-10-2023 ರಂದು ಸಂಭವಿಸಿದ ಮೂರು ಗ್ರಹಣಗಳು ಭಾರತದ ಮೇಲೆ ಯಾವುದೇ ಪರಿಣಾಮ ಉಂಟು ಮಾಡಲಿಲ್ಲ. ಆದರೆ, ವಿದೇಶಗಳಲ್ಲಿ ಅದರ ಪರಿಣಾಮಗಳನ್ನು ನೋಡಿದ್ದೇವೆ.
ಹವಾಮಾನ ವೈಪರೀತ್ಯ: ದೇಶದಲ್ಲಿ ಹವಾಮಾನ ಬದಲಾವಣೆಯ ಕೆಲವೊಂದು ಪರಿಣಾಮಗಳು ಗೋಚರಿಸಲಿವೆ. ಸಮುದ್ರವು ಉಕ್ಕಿ ಜಲಧಾರೆಯಿಂದ ಕಷ್ಟನಷ್ಟಗಳು ಆಗುವ ಸಂಭವಗಳು ಇವೆ. ಯುದ್ಧಭೀತಿಯೂ ಇದೆ. ಈಗಾಗಲೇ ದೇಶವು ಕ್ಷಾಮದ ಭೀತಿಯಲ್ಲಿ ಇರುವುದರಿಂದ, ಆಹಾರಧಾನ್ಯಗಳ ಬೆಲೆ ಹೆಚ್ಚಲಿದೆ. ಉತ್ಪಾದನೆ ಪ್ರಮಾಣವು ಕಡಿಮೆ ಆಗಲಿದೆ. ಆಹಾರಧಾನ್ಯಗಳ ಸಂಸ್ಕರಣೆ ಮತ್ತು ಶೇಖರಣೆಯತ್ತ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಬೇಕು.
ಉತ್ತರ ಭಾರತದಲ್ಲಿ ಗ್ರಹಣದ ಒಂದು ಛಾಯೆಯು ಹೆಚ್ಚು ಆತಂಕವನ್ನು ಉಂಟುಮಾಡುತ್ತದೆ. ಹೊರರಾಷ್ಟ್ರಗಳು ನಮ್ಮ ದೇಶದ ಶಾಂತಿಯನ್ನು ಕದಡುವುದರಲ್ಲೂ, ಯುದ್ಧಭೀತಿಯನ್ನು ಪ್ರದರ್ಶಿಸುವುದರಲ್ಲೂ ಕಾತರರಾಗಿರುತ್ತಾರೆ. ಬೇಹುಗಾರಿಕೆಗೆ ವಿಶೇಷವಾದ ಗಮನವನ್ನು ನೀಡಬೇಕು. ಈ ಗ್ರಹಣದ ಛಾಯೆಯು 45 ದಿನಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ರಾಷ್ಟ್ರವು ಎಚ್ಚರವಾಗಿ ಇರಬೇಕು ಮತ್ತು ರಾಷ್ಟ್ರವನ್ನು ಆಳುವ ದೊರೆಗೆ ಯಾವೊಂದು ಮರಣಭೀತಿಯಾಗಲಿ, ಕ್ಷಾಮಡಾಮರಗಳ ತೊಂದರೆಯಾಗಲಿ ಉಂಟಾಗಬಾರದೆಂದು ಪ್ರಾರ್ಥಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿರುತ್ತದೆ.
ಗ್ರಹಣದ ದಿನ ರಾಷ್ಟ್ರವನ್ನು ಆಳುವವರ ರಕ್ಷಣೆಗೆ ಮತ್ತು ಪ್ರಜೆಗಳ ಹಿತಕ್ಕಾಗಿ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ದೇಶದ ಉದ್ದಗಲಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕು.
ಶುಭ ಫಲ- ಮಿಥುನ, ಕನ್ಯಾ, ಮಕರ, ಕುಂಭ
ಮಿಶ್ರ ಫಲ- ವೃಷಭ, ಸಿಂಹ, ತುಲಾ, ಧನಸ್ಸು
ಅಶುಭ ಫಲ- ಮೇಷ, ಕರ್ಕ, ವೃಶ್ಚಿಕ, ಮೀನ
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ|
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ|
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಹಃ|
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು||
ಗ್ರಹಣದ ಸಮಯದಲ್ಲಿ ಚಂದ್ರ ಅಷ್ಟೋತ್ತರವನ್ನು, ನವಗ್ರಹ ಚಂದ್ರ ಮಂತ್ರವನ್ನು ಉಪಾಸನೆ ಮಾಡಿದರೆ ಬಹಳ ಒಳ್ಳೆಯದು, ಶುಭಕರ. ರಾಹುಕೇತುಗಳಿಗೆ ಪ್ರಾರ್ಥನೆ ಮಾಡಿದರೆ ಒಳ್ಳೆಯದು. ಸರ್ಪಸೂಕ್ತ ಪಾರಾಯಣ, ಸುಬ್ರಹ್ಮಣ್ಯ ದೇವರ ಪಾರಾಯಣ ಮಾಡಿದರೆ ಹಿತವನ್ನುಂಟು ಮಾಡುತ್ತದೆ. ಸಾಧ್ಯವಿದ್ದವರು ಸುಬ್ರಹ್ಮಣ್ಯ ದೇವರಿಗೆ ಮನೆಯಲ್ಲಾಗಲಿ, ದೇವಸ್ಥಾನದಲ್ಲಾಗಲಿ ಭಾನುವಾರ ಕ್ಷೀರಾಭಿಷೇಕ ಮಾಡುವುದು ಸೂಕ್ತ. ಪೌರ್ಣಿಮೆ ಇರುವುದರಿಂದ ಸತ್ಯನಾರಾಯಣ ಸ್ವರೂಪಿ ವಿಷ್ಣುವನ್ನು ಆರಾಧಿಸಬಹುದು. ದುರ್ಗಾ ಸಹಸ್ರನಾಮ ಪಠಣ, ಉಮಾಮಹೇಶ್ವರ ವ್ರತಕಥೆಯ ವಾಚನ ಮಾಡಿದರೆ, ಸಂಕಷ್ಟಗಳು ದೂರವಾಗುತ್ತವೆ. ನೀವು ಏನನ್ನೂ ಕಳೆದುಕೊಳ್ಳದಂತೆ ದೇವರೇ ಕಾಪಾಡುವುದರಲ್ಲಿ ಸಂದೇಹವಿಲ್ಲ.