ನ್ಯೂಸ್

ವಾಚ್ ರಿಪೇರಿಯಿಂದ ಕೆಜಿಎಫ್​ವರೆಗೆ!; ಛಾಯಾಗ್ರಾಹಕ ಭುವನ್​ಗೌಡ ಯಶೋಗಾಥೆ

Webdesk - Ravikanth

| ಕೆ.ಎನ್.ರಾಘವೇಂದ್ರ ಮಂಡ್ಯ

ಸದ್ಯ ಎಲ್ಲೇ ಹೋದರೂ ‘ಕೆಜಿಎಫ್ 2’ ಚಿತ್ರದ್ದೇ ಚರ್ಚೆ. ಚಿತ್ರದಲ್ಲಿನ ರಣರೋಚಕ ದೃಶ್ಯಗಳನ್ನು ಸೆರೆಹಿಡಿದ ಭುವನ್ ಗೌಡ ಅವರ ಕೈಚಳಕಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮದ್ದೂರು ತಾಲ್ಲೂಕು, ಕೌಡ್ಲೆ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಭುವನ್ ಗೌಡ, ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪಡೆದರು. ವ್ಯಾಸಂಗದ ಜತೆಗೆ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಆಗ ಇವರನ್ನು ಸ್ನೇಹಿತರು ಪ್ರೀತಿಯಿಂದ ಬೋನಿ ಎನ್ನುತ್ತಿದ್ದರು. ಪಿಯುಸಿ ನಂತರ ಜೀವನೋಪಾಯಕ್ಕಾಗಿ ಗ್ರಾಮದಲ್ಲಿ ಚಿಕ್ಕದಾಗಿ ವಾಚ್ ರಿಪೇರಿ ಮಾಡುವ ಅಂಗಡಿ ಪ್ರಾರಂಭಿಸಿದರು. ಇನ್ನಷ್ಟು ಸಂಪಾದನೆ ಮಾಡಬೇಕೆಂದು ಬೆಂಗಳೂರಿನತ್ತ ಮುಖ ಮಾಡಿದರು. ಆದರೆ, ಜೀವನ ಅಷ್ಟೊಂದು ಸುಲಭವಾಗಿರಲಿಲ್ಲ.

ವಾಚ್ ರಿಪೇರಿ ಬಿಟ್ಟು ಸಿಮೆಂಟ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಸ್ವಲ್ಪ ದಿನ ದುಡಿದ ನಂತರ ರಿಲಯನ್ಸ್​ನಲ್ಲಿ ಬಿಲ್ ಕಲೆಕ್ಟರ್ ಉದ್ಯೋಗ ಗಿಟ್ಟಿಸಿಕೊಂಡರು. ಈ ವೇಳೆ ಚಿತ್ರ ಕಲಾವಿದರೊಂದಿಗೆ ಬಾಂಧವ್ಯ ಬೆಳೆಯಿತು. ನೋಡಲು ಸುಂದರವಾಗಿದ್ದ ಕಾರಣಕ್ಕೆ ಧಾರಾವಾಹಿಯಲ್ಲಿ ನಟಿಸುವಂತೆ ಕೆಲವರು ಸಲಹೆ ನೀಡಿದರು. ಅದರಂತೆ ಭುವನ್ ಗೌಡ ಫೋಟೋ ಶೂಟ್ ಮಾಡಿಸಿದರು. ಈ ಸಂದರ್ಭದಲ್ಲಿ ಫೋಟೋಗ್ರಫಿಯತ್ತ ಆಕರ್ಷಿತರಾದ ಅವರು, ಹಠತೊಟ್ಟು ತರಬೇತಿ ಪಡೆದರು, ಅಲ್ಲಿಂದ ಚಿತ್ರರಂಗದೊಂದಿಗೆ ನಂಟು ಆರಂಭವಾಯಿತು.

ಬದುಕು ಬದಲಿಸಿದ ‘ಉಗ್ರಂ’: ಸ್ಟಿಲ್ ಫೋಟೋಗ್ರಫಿ ಮಾಡುತ್ತಿದ್ದ ಭುವನ್, ನಂತರ ಛಾಯಾಗ್ರಹಣ ತರಬೇತಿ ಪಡೆದುಕೊಂಡರು. ಈ ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪರಿಚಯವಾಯಿತು. ‘ಉಗ್ರಂ’ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದವರು ಕೈಕೊಟ್ಟ ಕಾರಣ ಭುವನ್ ಗೌಡಗೆ ಅವಕಾಶ ಸಿಕ್ಕಿತ್ತು. ಇಲ್ಲಿಂದ ಅವರ ಬದುಕೇ ಬದಲಾಯಿತು. ‘ಉಗ್ರಂ’ನಲ್ಲಿಯೇ ಉತ್ತಮ ಕೈಚಳಕ ತೋರಿದ ನಂತರ ಒಂದೊಂದೇ ಸಿನಿಮಾ ಹುಡುಕಿ ಬಂದವು. ‘ಉಗ್ರಂ’ ನಂತರ ಶ್ರೀಮುರುಳಿ ಅಭಿನಯದ ‘ರಥಾವರ’, ‘ಪುಷ್ಪಕ ವಿಮಾನ’ ಮಾಡಿದರು. ಇದಾದ ನಂತರ ಪ್ರಶಾಂತ್ ನೀಲ್ ಹಾಗೂ ನಟ ಯಶ್ ತಂಡದೊಂದಿಗೆ ‘ಕೆಜಿಎಫ್’ ಪ್ರಾರಂಭಿಸಿದರು. ‘ಕೆಜಿಎಫ್ 1’ ಹೊಸ ಸಂಚಲನ ಮೂಡಿಸಿತು. ಚಿತ್ರದ ಗೆಲುವಿನಲ್ಲಿ ಛಾಯಾಗ್ರಹಣವೂ ಒಂದು ಪ್ರಮುಖ ಭಾಗವಾಗಿತ್ತು. ಭುವನ್ ಪರಿಶ್ರಮಕ್ಕೆ ಸೈಮಾ ಪ್ರಶಸ್ತಿಯೂ ಸಿಕ್ಕಿತು. ಈಗ ಬಿಡುಗಡೆಯಾಗಿರುವ ‘ಕೆಜಿಎಫ್ 2’ಎಲ್ಲೆಡೆ ಅಬ್ಬರಿಸುತ್ತಿದೆ.ಅವರ ಕೆಲಸಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಇದರಿಂದಾಗಿ ಭುವನ್ ಇನ್ನಷ್ಟು ಎತ್ತರಕ್ಕೆ ಹೋಗಿದ್ದಾರೆ.