ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಕಳೆದ 10 ವರ್ಷಗಳ ಅವಧಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ. 370ನೇ ವಿಧಿ ಈಗ ಇತಿಹಾಸವಾಗಿದೆ ಹಾಗೂ ಅದು ಎಂದಿಗೂ ಹಿಂತಿರುಗುವುದಿಲ್ಲ ಎಂದು ನಾನು ಇಡೀ ದೇಶಕ್ಕೆ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಚುನಾವಣಾ ಪ್ರಣಾಳಿಕೆಯನ್ನು ಶುಕ್ರವಾರ (ಸೆಪ್ಟೆಂಬರ್ 06) ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಆರ್ಟಿಕಲ್ 370 ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿದೆ. ಇದು ಯುವಕರ ಕೈಯಲ್ಲಿ ಶಸ್ತ್ರಾಸ್ತ್ರ ಮತ್ತು ಕಲ್ಲುಗಳನ್ನು ನೀಡಿದ್ದು ಮಾತ್ರವಲ್ಲದೆ ಭಯೋತ್ಪಾದನೆಯ ಹಾದಿ ತುಳಿಯಲು ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.
ನನಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಜೆಂಡಾ ತಿಳಿದಿದೆ. 370ನೇ ವಿಧಿ ಮುಂದೆಂದೂ ಬರುವುದಿಲ್ಲ. ಈಗ 370ನೇ ವಿಧಿ ಇನ್ನು ಮುಂದೆ ಸಂವಿಧಾನದ ಭಾಗವಾಗಿಲ್ಲ ಎಂದು ಹೇಳಿದರು. ಉತ್ತಮ ಆಡಳಿತವನ್ನು ಮುಂದುವರಿಸಲು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಜನರಲ್ಲಿ ಕೇಂದ್ರ ಸಚಿವ ಮನವಿ ಮಾಡಿದರು.
ನಾನು ಒಮರ್ ಅಬ್ದುಲ್ಲಾಗೆ ಹೇಳಲು ಬಯಸುತ್ತೇನೆ. ಚುನಾವಣೆ ಫಲಿತಾಂಶ ಏನೇ ಇರಲಿ, ಗುಜ್ಜರ್, ಬಕರ್ವಾಲ್ ಮತ್ತು ಪಹಾಡಿಗಳಿಗೆ ನೀಡಲಾದ ಮೀಸಲಾತಿಯನ್ನು ಮುಟ್ಟಲು ನಿಮಗೆ ಅನುಮತಿ ನೀಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದರು
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ಮೂರು ಹಂತಗಳಲ್ಲಿ ಸೆಪ್ಟೆಂಬರ್ 18 ಮತ್ತು 25 ಮತ್ತು ಅಕ್ಟೋಬರ್ 1 ರಂದು ಮತದಾನ ನಡೆಯಲಿದೆ.(ಏಜೆನ್ಸೀಸ್)