ನವದೆಹಲಿ: ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರ್ಟಿಕಲ್ 370, ಜಿಎಸ್‌ಟಿ ಮತ್ತು ಒಂದು ಶ್ರೇಣಿ-ಒಂದು ಪಿಂಚಣಿ ಮಸೂದೆಗಳು ಸೇರಿದಂತೆ ತಮ್ಮ ಸರ್ಕಾರದ ಐತಿಹಾಸಿಕ ನಿರ್ಧಾರಗಳನ್ನು ಶ್ಲಾಘಿಸಿದರು.
ಸಂಸತ್ತಿನ ಹೊಸ ಭವನಕ್ಕೆ ಸ್ಥಳಾಂತರಗೊಳ್ಳುವ ವಿಶೇಷ ಅಧಿವೇಶನದ ಮೊದಲ ದಿನದ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ಸುದೀರ್ಘವಾಗಿ ಮಾತನಾಡಿದ ಪ್ರಧಾನಿ, ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ಹಣಕ್ಕಾಗಿ ಮತ ಹಗರಣವನ್ನು ನೆನಪಿಸಿ, ವಿಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ 2001ರಲ್ಲಿ ನಡೆದ ಉಗ್ರರ ದಾಳಿಯೂ ಸೇರಿದಂತೆ ಹೊಸ ಸಂಸತ್ ಭವನದ ಕಹಿ ಮತ್ತು ಸಿಹಿ ಕ್ಷಣಗಳನ್ನು ಮೋದಿ ಮೆಲಕು ಹಾಕಿದರು.
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದು ಇದರಿಂದಲೇ ಸಾಧ್ಯವಾಯಿತು ಎಂದು ಸದನವು ಎಂದಿಗೂ ಹೆಮ್ಮೆಯಿಂದ ಹೇಳುತ್ತದೆ. ಜಿಎಸ್‌ಟಿ ಕೂಡ ಇಲ್ಲಿಯೇ ಜಾರಿಯಾಯಿತು. ಒಂದು ಶ್ರೇಣಿ-ಒಂದು ಪಿಂಚಣಿ ಮಸೂದೆಗೂ ಈ ಭವನ ಸಾಕ್ಷಿಯಾಗಿದೆ ಮತ್ತು ಆರ್ಥಿಕ ದುರ್ಬಲರಿಗೆ ಶೇ. 10 ರಷ್ಟು ಮೀಸಲಾತಿ ಬಿಲ್ ವಿವಾದವಿಲ್ಲದೆ ಮೊದಲ ಬಾರಿಗೆ ಜಾರಿಗೆಯಾಗಿದೆ ಎನ್ನುವ ಮೂಲಕ ಹಳೇ ಸಂಸತ್ ಭವನದ ಸ್ಮರಣೀಯ ಕ್ಷಣಗಳನ್ನು ನೆನೆದರು.
ಇದೀಗ ಈ ಕಟ್ಟಡಕ್ಕೆ ವಿದಾಯ ಹೇಳುವುದು ಒಂದು ಭಾವನಾತ್ಮಕ ಕ್ಷಣವಾಗಿದೆ. ಈ ಕಟ್ಟಡದೊಂದಿಗೆ ಅನೇಕ ಕಹಿ-ಸಿಹಿ ನೆನಪುಗಳು ಸೇರಿವೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳು ಇರಬಹುದು ಆದರೆ, ನಾವು 'ಪರಿವಾರ ಭಾವ' ('ಕುಟುಂಬದ ಭಾವನೆ')ಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಮೋದಿ ಹೇಳಿದಾಗ ಬಿಜೆಪಿ ಸಂಸದರು ಮೇಜು ತಟ್ಟಿ ಸಹಮತ ವ್ಯಕ್ತಪಡಿಸಿದರು.
ಹಳೇ ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಇದು ಕಟ್ಟಡದ ಮೇಲಿನ ದಾಳಿಯಲ್ಲ, ಒಂದು ರೀತಿಯಲ್ಲಿ ಇದು ಪ್ರಜಾಪ್ರಭುತ್ವದ ಮಾತೆಯ ಮೇಲಿನ ದಾಳಿ... ನಮ್ಮ ಜೀವಂತ ಆತ್ಮದ ಮೇಲಿನ ದಾಳಿಯಾಗಿದೆ. ದೇಶವು ಎಂದಿಗೂ ಈ ಘಟನೆಯನ್ನು ಮರೆಯಲು ಸಾಧ್ಯವಿಲ್ಲ ಎನ್ನುವ ಮೂಲಕ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ನಾನು ಸಂಸದನಾಗಿ ಮೊದಲ ಬಾರಿಗೆ ಈ ಭವನವನ್ನು ಪ್ರವೇಶಿಸಿದಾಗ ಪ್ರಜಾಪ್ರಭುತ್ವದ ದೇವಾಲಯಕ್ಕೆ ನಮಸ್ಕರಿಸಿ ಗೌರವಿಸಿದೆ. ಅದೊಂದು ಭಾವನಾತ್ಮಕ ಕ್ಷಣ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ವಾಸಿಸುವ ಬಡ ಕುಟುಂಬದ ಮಗು ಸಂಸತ್ತಿಗೆ ಪ್ರವೇಶಿಸಬಹುದು ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನಗೆ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನಾವೆಲ್ಲರೂ ಈ ಐತಿಹಾಸಿಕ ಕಟ್ಟಡಕ್ಕೆ ವಿದಾಯ ಹೇಳುತ್ತಿದ್ದೇವೆ. ಸ್ವಾತಂತ್ರ್ಯದ ಮೊದಲು ಇದು ಸಾಮ್ರಾಜ್ಯಶಾಹಿ ವಿಧಾನ ಪರಿಷತ್ತಿನ ಸ್ಥಳವಾಗಿತ್ತು. ಸ್ವಾತಂತ್ರ್ಯದ ನಂತರ ಇದು ಸಂಸತ್ತಿನ ಗುರುತನ್ನು ಗಳಿಸಿತು. ಈ ಕಟ್ಟಡವನ್ನು ನಿರ್ಮಿಸುವ ನಿರ್ಧಾರವನ್ನು ವಿದೇಶಿ ದೊರೆಗಳು ತೆಗೆದುಕೊಂಡಿರುವುದು ನಿಜ ಆದರೆ, ನಿರ್ಮಾಣಕ್ಕೆ ವ್ಯಯಿಸಿದ ಶ್ರಮ ಮತ್ತು ಹಣ (ನಮ್ಮ) ದೇಶವಾಸಿಗಳದ್ದು ಎಂದು ನಾವು ಹೆಮ್ಮೆಯಿಂದ ಹೇಳಬಹುದು ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಚಂದ್ರಯಾನ-3 ಚಂದ್ರ ಯೋಜನೆಯ ಯಶಸ್ಸನ್ನು ಶ್ಲಾಘಿಸಿದರು. ಭಾರತವು ಜಗತ್ತನ್ನು ಹೆಮ್ಮೆಪಡುವಂತೆ ಮಾಡಿದೆ. ಭಾರತದ ಶಕ್ತಿಯ ಹೊಸ ರೂಪವನ್ನು ಎತ್ತಿ ತೋರಿಸಿದೆ ಎಂದು ಹೇಳಿದರು. G20 ಶೃಂಗಸಭೆಯ ಯಶಸ್ಸಿನ ಬಗ್ಗೆ ಮಾತನಾಡಿ, ಆ ಯಶಸ್ಸನ್ನು 140 ಕೋಟಿ ಜನತೆಗೆ ಅರ್ಪಿಸಿದರು. ನೀವು ಜಿ-20ಯ ಯಶಸ್ಸನ್ನು ಸರ್ವಾನುಮತದಿಂದ ಶ್ಲಾಘಿಸಿದ್ದೀರಿ. ನಾನು ನಿಮಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಜಿ-20 ಯಶಸ್ಸಿನ ಯಶಸ್ಸು ದೇಶದ 140 ಕೋಟಿ ನಾಗರಿಕರದ್ದು. ಇದು ಭಾರತದ ಯಶಸ್ಸೇ ಹೊರತು ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದಲ್ಲ ಎಂದರು. (ಏಜೆನ್ಸೀಸ್)