ನ್ಯೂಸ್

ರೂಪಾಯಿ ಕುಸಿತದ ಆಚೆ-ಈಚೆ: ಭಾರತೀಯ ಕರೆನ್ಸಿಯ ಪ್ರದರ್ಶನ ಪ್ರಗತಿದಾಯಕ

| ಜಗದೀಶ ಬುರ್ಲಬಡ್ಡಿ

‘ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ; ಬದಲಿಗೆ ಡಾಲರ್ ಬಲವರ್ಧನೆಗೊಳ್ಳುತ್ತಿದೆ.’

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಹೀಗೊಂದು ಸಮಜಾಯಿಷಿ ನೀಡಿದ್ದಾರೆ.

ಈ ಹೇಳಿಕೆಯನ್ನು ಗೇಲಿ ಮಾಡಿ ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ. ‘ರೂಪಾಯಿ ದುರ್ಬಲಗೊಳ್ಳುತ್ತಿಲ್ಲ; ಆದರೆ, ಡಾಲರ್ ಬಲಗೊಳ್ಳುತ್ತಿದೆ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಅದು ಸಂಪೂರ್ಣ ನಿಜ. ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಥವಾ ಪಕ್ಷವು ಯಾವಾಗಲೂ ಹೇಳೋದು ಏನು ಗೊತ್ತೆ? ನಾವು ಚುನಾವಣೆಯಲ್ಲಿ ಸೋತಿಲ್ಲ; ಬೇರೊಂದು ಪಕ್ಷ ಗೆದ್ದಿದೆ ಎಂದು’.

‘ಈಗ ಒಂದು ಡಾಲರ್ ಬೆಲೆ 83 ರೂಪಾಯಿ ದಾಟುವ ಹಂತಕ್ಕೆ ಬಂದು ನಿಂತಿದೆ. 100 ರೂಪಾಯಿ ದಾಟಿದ ನಂತರವೇ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ನಿಲ್ಲಿಸಲಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಕೂಡ ಅಪಹಾಸ್ಯ ಮಾಡಿದ್ದಾರೆ. ಇದೇ ರೀತಿ ವಿರೋಧ ಪಕ್ಷಗಳ ನಾಯಕರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸಚಿವೆ ನಿರ್ಮಲಾ ಹೇಳಿಕೆಯನ್ನು ವ್ಯಂಗಭರಿತ ಧಾಟಿಯಲ್ಲೇ ಟೀಕಿಸಿದ್ದಾರೆ.

ವಾಸ್ತವ ಚಿತ್ರಣ: ‘ನಾನು ಇದನ್ನು ರೂಪಾಯಿ ಕುಸಿತ ಎಂದು ನೋಡುವುದಿಲ್ಲ. ಆದರೆ, ಡಾಲರ್ ಬಲಗೊಳ್ಳುತ್ತಿದೆ. ಡಾಲರ್​ನ ಏರಿಕೆಯನ್ನು ರೂಪಾಯಿ ತಡೆಹಿಡಿದಿದೆ ಎಂಬುದು ಸತ್ಯ. ಅಲ್ಲದೆ, ರೂಪಾಯಿಯು ಇತರ ಅನೇಕ ಉದಯೋನ್ಮುಖ ಮಾರುಕಟ್ಟೆಗಳ ಕರೆನ್ಸಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ’ ಎಂದು ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ಹಾಸ್ಯಾಸ್ಪದ ಎಂಬಂತೆ ಕಂಡುಬಂದರೂ ವಾಸ್ತವಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡರೆ, ಇತರೆ ದೇಶಗಳ ಕರೆನ್ಸಿಗಳನ್ನು ರೂಪಾಯಿ ಎದುರು ಅಳೆದುತೂಗಿ ನೋಡಿದರೆ ಈ ಹೇಳಿಕೆಯನ್ನು ಅಲ್ಲಗಳೆಯಲು ಆಗುವುದಿಲ್ಲ.

ಏಕೆಂದರೆ, ಜಗತ್ತಿನ ಬಹುತೇಕ ಪ್ರಮುಖ ಕರೆನ್ಸಿಗಳು ಡಾಲರ್ ಎದುರು ರೂಪಾಯಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡಿರುವುದನ್ನು ಅಂಕಿ-ಅಂಶಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಅಲ್ಲದೆ, ಡಾಲರ್ ಹೊರತುಪಡಿಸಿ, ಜಗತ್ತಿನ ಪ್ರಮುಖ ದೇಶಗಳ ಕರೆನ್ಸಿ ಎದುರು ರೂಪಾಯಿ ಮೌಲ್ಯ ಹೆಚ್ಚಳವನ್ನೇ ಕಂಡಿರುವುದನ್ನು ಕೂಡ ದತ್ತಾಂಶಗಳೇ ಮನದಟ್ಟು ಮಾಡಿಕೊಡುತ್ತವೆ.

ಡಾಲರ್ ದರ್ಬಾರ್: 2000ನೇ ಇಸ್ವಿಯಿಂದ ಪರಿಗಣಿಸಿದರೆ, ಈಗ ಅಮೆರಿಕದ ಡಾಲರ್ ಬೆಲೆ ಅತ್ಯಧಿಕ ಮಟ್ಟದಲ್ಲಿದೆ. ಈ ವರ್ಷದ ಆರಂಭದಿಂದ ಜಪಾನ್​ನ ಕರೆನ್ಸಿ ಯೆನ್ ವಿರುದ್ಧ ಶೇ. 22, ಐರೋಪ್ಯ ರಾಷ್ಟ್ರಗಳ ಯುರೋ ಕರೆನ್ಸಿ ವಿರುದ್ಧ ಶೇ. 13 ಮತ್ತು ಉದಯೋನ್ಮುಖ ಮಾರುಕಟ್ಟೆ ಕರೆನ್ಸಿಗಳ ವಿರುದ್ಧ ಶೇ. 6ರಷ್ಟು ಏರಿಕೆಯನ್ನು ಡಾಲರ್ ಕಂಡಿದೆ. ಡಾಲರ್​ಗೆ ಹೋಲಿಸಿದರೆ ಭಾರತದ ರೂಪಾಯಿಯ ಮೌಲ್ಯ ಈ ವರ್ಷ ಶೇ. 8ರಷ್ಟು ಕಡಿಮೆಯಾಗಿದೆ.

ಸಚಿವೆ ನಿರ್ಮಲಾ ಹೇಳಿದಂತೆ ಡಾಲರ್ ನಿರಂತರವಾಗಿ ಬಲಗೊಳ್ಳುತ್ತಿದೆ. ರೂಪಾಯಿ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಇದೇ ವರ್ಷ ಜನವರಿ 1 ರಂದು ಒಂದು ಡಾಲರ್​ಗೆ 74.50 ರೂ ಇತ್ತು. ಅದು ಈಗ 82 ರೂಪಾಯಿಗಿಂತ ಹೆಚ್ಚಾಗಿದೆ. ಡಾಲರ್​ನ ಮೌಲ್ಯವು ಒಂದು ವರ್ಷದಿಂದ ಮೇಲಕ್ಕೆ ಏರುತ್ತಿದೆ. ಪ್ರಪಂಚದಾದ್ಯಂತದ ಪ್ರತಿಯೊಂದು ಕರೆನ್ಸಿಯ ವಿರುದ್ಧ ಬಲಗೊಳ್ಳುತ್ತಿದೆ. ಹಾಗಾಗಿ, ಜನವರಿ 1ರಂದು ಒಂದು ಡಾಲರ್​ಗೆ 0.88 ಇದ್ದ ಯೂರೋ ಕರೆನ್ಸಿ ಈಗ ಒಂದು ಡಾಲರ್​ಗೆ 1.02 ಆಗಿದೆ. ವರ್ಷದ ಆರಂಭದಲ್ಲಿ ಡಾಲರ್ ಎದುರು 0.73 ಇದ್ದ ಬ್ರಿಟಿಷ್ ಪೌಂಡ್ ಈಗ 0.89 ಆಗಿದೆ. ಇದೇ ಅವಧಿಯಲ್ಲಿ ಆಸ್ಟ್ರೇಲಿಯನ್ ಡಾಲರ್ 1.37 ರಿಂದ 1.61 ಕ್ಕೆ ಹೋಗಿದೆ. ಜಪಾನಿನ ಯೆನ್ ದರವು 115ರಿಂದ 148ಕ್ಕೆ ಹೆಚ್ಚಳ ಕಂಡಿದೆ. ‘ಈ ವರ್ಷದ ಎರಡನೇ ತ್ರೖೆಮಾಸಿಕದಲ್ಲಿ ಏಷ್ಯಾ ದೇಶಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕರೆನ್ಸಿಗಳೆಂದರೆ ಭಾರತದ ರೂಪಾಯಿ ಮತ್ತು ಮಲೇಷ್ಯಾದ ರುಪಿಯಾ’ ಎಂದು ಬ್ಲೂಮ್​ಗ್ ಹೇಳಿದೆ.

2013ರಲ್ಲಿ ಯುಪಿಎ ಆಡಳಿತದ ಅವಧಿಯಲ್ಲಿ ಸಂಭವಿಸಿದಂತೆ ಎಲ್ಲಾ ಕರೆನ್ಸಿಗಳ ವಿರುದ್ಧ ದುರ್ಬಲಗೊಂಡಾಗ ಮಾತ್ರ ರೂಪಾಯಿ ದುರ್ಬಲಗೊಳ್ಳುತ್ತಿದೆ ಎಂದು ಹೇಳಬಹುದಾಗಿದೆ. | ಸಂಬಿತ್ ಪಾತ್ರಾ ಬಿಜೆಪಿ ವಕ್ತಾರ
ಮುಗ್ಗರಿಸಿದ ಕರೆನ್ಸಿಗಳು: ಸೆಪ್ಟೆಂಬರ್ ತಿಂಗಳಲ್ಲಿ ರೂಪಾಯಿ ಬೆಲೆಯು ಡಾಲರ್ ಎದುರು ಶೇ. 2.6ರಷ್ಟು ಕುಸಿತ ಕಂಡು 82 ರೂಪಾಯಿ ದಾಟಿದರು ಕೂಡ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚು ಸ್ಥಿರವಾದ ಕರೆನ್ಸಿಗಳಲ್ಲಿ ಒಂದು ಎಂಬುದನ್ನು ಅಂಕಿ-ಅಂಶಗಳೇ ಸೂಚಿಸುತ್ತವೆ. ಜಗತ್ತಿನ ಬಹುತೇಕ ಎಲ್ಲಾ ಪ್ರಮುಖ ಕರೆನ್ಸಿಗಳು ಡಾಲರ್ ಎದುರು ಸಾಕಷ್ಟು ಕುಸಿತ ಕಂಡಿವೆ. ಸೆಪ್ಟೆಂಬರ್​ನಲ್ಲಿ ಡಾಲರ್ ಎದುರು ಕೊರಿಯಾದ ವನ್ ಹಾಗೂ ಬ್ರಿಟಿಷ್ ಪೌಂಡ್ ಶೇ. 6 ಕುಸಿದಿವೆ. ಆಸ್ಟ್ರೇಲಿಯನ್ ಡಾಲರ್ ಶೇ. 4.8 ಕಡಿಮೆಯಾಗಿದೆ. ಸ್ವೀಡನ್​ನ ಕ್ರೋನಾ ಶೇ. 4.6ರಷ್ಟು, ಚೀನಾದ ಯುವಾನ್ ಮತ್ತು ಫಿಲಿಪಿನ್ಸ್​ನ ಪೆಸೊ ಶೇ. 4.1 ಕುಸಿತ ದಾಖಲಿಸಿವೆ. ಈ ಎಲ್ಲ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಶೇ. 2.6 ಕುಸಿತ ಕಂಡಿದ್ದು, ಯೂರೋ (ಶೇ. 2.4 ಕುಸಿತ) ಕರೆನ್ಸಿಗೆ ಸಮನಾಗಿ ಪ್ರದರ್ಶನ ನೀಡಿದೆ.

ಡಾಲರ್ ಬಲವರ್ಧನೆ ಏಕೆ?: ಅಮೆರಿಕದ ಆರ್ಥಿಕತೆ ಇತರ ದೇಶಗಳ ಆರ್ಥಿಕತೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹಣದುಬ್ಬರದ ಹೆಚ್ಚಿನ ದರಗಳ ಹೊರತಾಗಿಯೂ, ಅಮೆರಿಕದ ಉದ್ಯೋಗ ಮಾರುಕಟ್ಟೆ ಉತ್ತಮವಾಗಿದೆ. ಸೇವಾ ವಲಯದಂತಹ ಕ್ಷೇತ್ರಗಳು ಕೂಡ ಸಾಕಷ್ಟು ಸುಧಾರಣೆ ಕಂಡಿವೆ. ಇದು ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ಅಮೆರಿಕದ ಬಗೆಗಿನ ವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲದೆ, ಅಮೆರಿಕದ ವಸತಿ ವಲಯದಲ್ಲಿನ ನಿಧಾನಗತಿಯ ಬೆಳವಣಿಗೆಯ ಕುರಿತ ಕಳವಳಗಳನ್ನು ಸರಿದೂಗಿಸಲು ಈ ಎಲ್ಲ ಸಂಗತಿಗಳು ಕಾರಣವಾಗಿವೆ.

ರೂಪಾಯಿ ಬಲಶಾಲಿ: ಬ್ರಿಟನ್ನಿನ ಒಂದು ಸ್ಟರ್ಲಿಂಗ್ ಪೌಂಡ್ ಬೆಲೆ ಈಗ 92.91 ರೂಪಾಯಿ ಇದೆ. 2021ರ ಅಕ್ಟೋಬರ್ ತಿಂಗಳಲ್ಲಿ ಒಂದು ಪೌಂಡ್ ಬೆಲೆ ಸರಾಸರಿ 102.5 ರೂಪಾಯಿ ಇತ್ತು. ಐರೋಪ್ಯ ರಾಷ್ಟ್ರಗಳ ಕರೆನ್ಸಿಯಾದ ಯೂರೋ ಎದುರು ಕೂಡ ರೂಪಾಯಿ ಮೌಲ್ಯವರ್ಧನೆಗೊಂಡಿದೆ. ಈಗ 1 ಯೂರೋ ಬೆಲೆ 80.01 ರೂಪಾಯಿ ಇದ್ದರೆ, ವರ್ಷದ ಹಿಂದೆ ಇದು 87 ರೂಪಾಯಿ ಇತ್ತು. ಇನ್ನು ಜಪಾನಿನ ಯೆನ್ ಎದುರು ಕೂಡ ರೂಪಾಯಿ ಬಲಶಾಲಿಯಾಗುತ್ತಲೇ ಬಂದಿದೆ. ಒಂದು ಯೆನ್ ಈಗ 0.55 ರೂಪಾಯಿಗೆ (55 ಪೈಸೆ) ಸಮ. ವರ್ಷದ ಹಿಂದೆ ಇದು 66 ಪೈಸೆ ಇತ್ತು.