ನ್ಯೂಸ್

ಸಂಘರ್ಷದ ನಡುವೆಯೇ ಮಹೋನ್ನತ ಸಾಹಸ; 72 ತಾಸುಗಳಲ್ಲಿ ಗಾಲ್ವಾನ್​ ನದಿ ಸೇತುವೆ ಕಾಮಗಾರಿ ಪೂರ್ಣ

ನವದೆಹಲಿ: ಅತ್ತ ಭಾರತ- ಚೀನಾ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಿದ್ದರೆ, ಅದಕ್ಕೆ ಕಾರಣವಾಗಿದ್ದ ಸೇತುವೆಯ ಕಾಮಗಾರಿಯೊಂದನ್ನು ಪೂರ್ಣಗೊಳಿಸಿಯೇ ಭಾರತೀಯ ಸೇನಾ ಯೋಧರು ವಿರಮಿಸಿದ್ದಾರೆ.

ಜೂನ್​ 15ರಂದು ಮಧ್ಯರಾತ್ರಿ ಚೀನಾದೊಂದಿಗಿನ ಸಂಘರ್ಷದಲ್ಲಿ 23 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಮಂಗಳವಾರ ಬೆಳಗ್ಗೆ ಯೋಧರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಹುಡುಕಾಟ ಗಾಲ್ವಾನ್​ ನದಿ ತೀರದ ಪ್ರದೇಶದಲ್ಲಿ ನಡೆದಿತ್ತು. ಅದುವರೆಗೆ ಹೊರ ಜಗತ್ತಿಗೆ ಘಟನೆಯ ಭೀಕರತೆಯ ಅರಿವಾಗಿರಲಿಲ್ಲ.

ಆದರೆ, ಗಾಲ್ವಾನ್​ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಿದ್ದ ಸೇನಾ ಇಂಜಿನಿಯರ್​ಗಳಿಗೆ ಸಂಘರ್ಷಕ್ಕೆ ಕಾರಣವಾಗಿರೋದು ಭಾರತ ನಡೆಸುತ್ತಿರುವ ಮೂಲಸೌಕರ್ಯಗಳ ಅಭಿವೃದ್ಧಿಯೇ ಕಾರಣ ಎಂಬುದು ತಿಳಿದಿತ್ತು. ಯೋಧರು ಸಂಘರ್ಷ ನಡೆಸಿದ್ದ ಪ್ರದೇಶದ ಸೇತುವೆ ಒಂದೆರಡು ಕಿಲೋಮೀಟರ್​ಗಳಷ್ಟು ದೂರದಲ್ಲಿತ್ತು.

ಇದ್ಯಾವುದಕ್ಕೂ ಎದೆಗುಂದದ ಭಾರತೀಯ ಸೇನಾ ಇಂಜಿನಿಯರ್​ಗಳು ಸೇತುವೆ ಕಾಮಗಾರಿ ಪೂರ್ಣಗೊಳಿಸಿಯೇ ಸಿದ್ಧ ಎಂದು ಹಠ ತೊಟ್ಟಿದ್ದರು. ಇದಕ್ಕಾಗಿ ಸತತ ಮೂರು ದಿನಗಳವರೆಗೆ ಇನ್ನಿಲ್ಲದ ವೇಗದೊಂದಿಗೆ ಕೆಲಸ ನಡೆಸಿ ಸೇತುವೆ ನಿರ್ಮಾಣ ಮುಗಿಸಿದ್ದಾರೆ.

ಭಾರತೀಯ ಯೋಧರಿಗೆ ತ್ವರಿತ ಗತಿಯಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುವ 60 ಮೀಟರ್​ ಉದ್ದದ ಸೇತುವೆ ಸಂಪರ್ಕ ರಸ್ತೆಯ ಕಾಮಗಾರಿ ಬಾಕಿಯಾಗಿತ್ತು. ಸೋಮವಾರ ಮಧ್ಯರಾತ್ರಿಯ ಸಂಘರ್ಷದ ಬಳಿಕವೂ ಮಂಗಳವಾರ, ಬುಧವಾರ ಹಾಗೂ ಗುರುವಾರ ಕೆಲಸ ನಡೆಸಿದಿ ಇಂಜಿನಿಯರ್​ಗಳು ಗುರುವಾರ ಮಧ್ಯಾಹ್ನದ ವೇಳೆಗೆ ಸೇತುವೆಯನ್ನು ವಾಹನ ಸಂಚಾರಕ್ಕೆ ಸಜ್ಜುಗೊಳಿಸಿದ್ದರು.

ಬೈಲಿ ಬ್ರಿಜ್​ ಎಂದು ಹೇಳಲಾಗುವ ಈ ಲೋಹದ ಸೇತುವೆ ಮಿಲಿಟರಿ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಯಾವುದಕ್ಕೂ ಕಾರಣಕ್ಕೂ ಕಾಮಗಾರಿ ನಿಲ್ಲಕೂಡದು, ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಹಿರಿಯ ಅಧಿಕಾರಿಗಳು ನೀಡಿದ್ದ ಆದೇಶವನ್ನು ಸೇನಾಪಡೆ ಇಂಜಿನಿಯರ್​ಗಳು ಅಕ್ಷರಶಃ ಪಾಲಿಸಿ ಸೇತುವೆ ನಿರ್ಮಾಣ ಮುಗಿಸಿದ್ದಾರೆ.