Snake Eggs : ಹಾವು... ಈ ಪದ ಕೇಳಿದರೆ ಸಾಕು ಹಲವರಿಗೆ ಭಯವಾಗುತ್ತದೆ. ಕೆಲವರಿಗೆ ಹಾವನ್ನು ಕಂಡರೆ ಮಾತ್ರವಲ್ಲ, ಹಾವಿನ ಮೊಟ್ಟೆಗಳನ್ನು ಕಂಡರೂ ಹೆದರುತ್ತಾರೆ. ಹಾವಿನ ಮೊಟ್ಟೆಗಳ ಬಗ್ಗೆ ಅನೇಕರಿಗೆ ಹಲವಾರು ಅನುಮಾನಗಳಿವೆ. ಹಾವಿನ ಮೊಟ್ಟೆಯನ್ನು ತಿನ್ನಬಹುದೇ ಅಥವಾ ಬೇಡವೇ ಎಂಬ ಚರ್ಚೆಯೂ ನಡೆಯುತ್ತಿದೆ. ಈ ಕುರಿತಾದ ಆಸಕ್ತಿಕರ ಮಾಹಿತಿ ಇಲ್ಲಿದೆ.
ನಮ್ಮ ದೇಶದಲ್ಲಿ ಕೋಳಿ ಮೊಟ್ಟೆಗಳಿಗೆ ಭಾರೀ ಕ್ರೇಜ್ ಇದೆ. ಈ ಮೊಟ್ಟೆಗಳನ್ನು ಅನೇಕ ರೀತಿಯ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬಾತುಕೋಳಿ ಮತ್ತು ಉಷ್ಟ್ರಪಕ್ಷಿ ಮೊಟ್ಟೆಗಳನ್ನು ಸಹ ತಿನ್ನಲಾಗುತ್ತದೆ. ಆದರೆ, ಹಾವಿನ ಮೊಟ್ಟೆಯೆಂದರೆ ಸಾಕು ಒಂದು ರೀತಿಯ ಭಯ ಕಾಡುತ್ತದೆ. ಅಲ್ಲದೆ, ಹಾವಿನ ಮೊಟ್ಟೆ ತಿನ್ನಬಹುದೇ? ತಿಂದರೆ ಏನಾಗುತ್ತದೆ? ಎಂಬ ಪ್ರಶ್ನೆ ಅನೇಕರಲ್ಲಿದೆ.
ಈ ಪ್ರಶ್ನೆಗಳಿಗೆ ಮಧ್ಯಪ್ರದೇಶದ ಖಾರ್ಗೋನ್ ನಿವಾಸಿಯಾಗಿರುವ ಉರಗ ರಕ್ಷಕ ಮಹದೇವ್ ಪಟೇಲ್ ಉತ್ತರ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾವಿನ ಮೊಟ್ಟೆಯನ್ನು ಮನುಷ್ಯರು ತಿನ್ನಬಾರದು. ಯಾರಾದರೂ ಹಾವಿನ ಮೊಟ್ಟೆಯನ್ನು ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾವಿನ ಮೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಅಥವಾ ಪರಾವಲಂಬಿಗಳಿದ್ದು, ಇದರಿಂದ ಆಹಾರ ವಿಷ ಅಥವಾ ಸೋಂಕು ಉಂಟಾಗಬಹುದು ಎಂದು ಮಹದೇವ್ ಪಟೇಲ್ ವಿವರಿಸಿದರು.
ಹಾವಿನ ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಇದ್ದು, ಇದರಿಂದ ಆಹಾರ ಕಲುಷಿತವಾಗುತ್ತದೆ. ಅಲ್ಲದೆ, ಹಾವಿನ ಮೊಟ್ಟೆಗಳನ್ನು ತಿನ್ನುವುದು ಅಲರ್ಜಿಯನ್ನು ಉಂಟುಮಾಡಬಹುದು, ಇದು ಚರ್ಮದ ದದ್ದುಗಳು, ತುರಿಕೆ, ಉಸಿರಾಟದ ತೊಂದರೆಗಳು ಅಥವಾ ಅನಾಫಿಲ್ಯಾಕ್ಸಿಸ್‌ನಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಅಚ್ಚರಿಯ ಸಂಗತಿ ಏನೆಂದರೆ, ಹಾವಿನ ಮೊಟ್ಟೆಯಲ್ಲಿ ವಿಷ ಇರುವುದಿಲ್ಲ, ಅದನ್ನು ತಿಂದವನು ಸಾಯುವುದಿಲ್ಲ. ಬದಲಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಹದೇವ್ ಹೇಳಿದರು.
ತಜ್ಞರ ಪ್ರಕಾರ, ಹಾವಿನ ಮೊಟ್ಟೆಗಳಲ್ಲಿ ವಿಷ ಇರುವುದಿಲ್ಲ. ಏಕೆಂದರೆ ಹಾವಿನ ಕೋರೆಹಲ್ಲುಗಳ ಹಿಂದಿನ ಗ್ರಂಥಿಗಳಲ್ಲಿ ವಿಷವು ಉತ್ಪತ್ತಿಯಾಗುತ್ತದೆ. ಇದು ಮೊಟ್ಟೆಯ ಹಂತದಲ್ಲಿ ಉತ್ಪತ್ತಿಯಾಗುವುದಿಲ್ಲ. ಹಾವಿನ ಮೊಟ್ಟೆಗಳನ್ನು ತಿನ್ನುವುದರಿಂದ ವಿಷವು ಮನುಷ್ಯನ ದೇಹವನ್ನು ಸೇರುವ ಸಾಧ್ಯತೆಗಳು ತುಂಬಾ ಕಡಿಮೆ.
ಅಂದಹಾಗೆ ಭಾರತದಲ್ಲಿ ಹಾವುಗಳನ್ನು ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಅವರು ಹಾವಿನ ಮೊಟ್ಟೆಗಳನ್ನು ತಿನ್ನಲು ಯೋಚಿಸುವುದಿಲ್ಲ. ಆದರೆ, ವಿದೇಶದಲ್ಲಿ ಹಾವಿನ ಮೊಟ್ಟೆಗಳನ್ನು ತಿನ್ನುತ್ತಾರೆ. ಅಲ್ಲಿನ ಜನರು ಹಾವಿನ ಮೊಟ್ಟೆಗಳನ್ನು ತಿನ್ನಲು ಬಯಸಿದಾಗ, ಅವುಗಳನ್ನು ಚೆನ್ನಾಗಿ ಬೇಯಿಸುತ್ತಾರೆ. ಇದರಿಂದ ಅವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳು ನಾಶವಾಗುತ್ತವೆ.
ಮತ್ತೊಂದೆಡೆ, ಹಲವಾರು ಅಧ್ಯಯನಗಳು ಹಾವಿನ ಮೊಟ್ಟೆಗಳನ್ನು ತಿನ್ನಲು ಸಾಧ್ಯವಿದೆ ಮತ್ತು ಅವುಗಳು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿವೆ ಎಂದು ಬಹಿರಂಗಪಡಿಸಿವೆ. ಆದರೆ, ಹಾವಿನ ಮೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆಯೂ ಇದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ವನ್ಯಜೀವಿಗಳಿಗೆ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಮಹಾದೇವ ಪಟೇಲ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)