ನ್ಯೂಸ್

ಶಾರೀಕ್ ಚೇತರಿಕೆಗೆ ಇನ್ನೂ 15 ದಿನ; ಆಮೇಲೆ ಇನ್ನಷ್ಟು ಆಘಾತಕಾರಿ ಅಂಶಗಳು ಬೆಳಕಿಗೆ!

ಶಿವಮೊಗ್ಗ: ಕುಕ್ಕರ್ ಬ್ಲಾಸ್ಟ್ ನಡೆಸಿದ ಶಾರೀಕ್ ಆರೋಗ್ಯ ಸುಧಾರಣೆಯಾಗಬೇಕು. ಇನ್ನೂ 15 ದಿನ ಆತನಿಗೆ ಚಿಕಿತ್ಸೆ ನೀಡಬೇಕೆಂದು ವೈದ್ಯರು ಹೇಳಿದ್ದಾರೆ. ಆತ ಚೇತರಿಸಿಕೊಂಡ ಬಳಿಕ ಮತ್ತಷ್ಟು ಆಘಾತಕಾರಿ ಅಂಶಗಳು ಬೆಳಕಿಗೆ ಬರಲಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟದ ಸಮಗ್ರ ತನಿಖೆ ನಡೆಯುತ್ತಿದೆ. ಈಗಾಗಲೇ ಹಲವು ಮಾಹಿತಿಗಳು ಸಿಕ್ಕಿವೆ. ಆದರೆ ಈ ಹಂತದಲ್ಲಿ ನಾನು ಅದನ್ನು ಬಹಿರಂಗಪಡಿಸುವುದಿಲ್ಲ. ಪೊಲೀಸರು ಯಾರನ್ನೂ ವಶಕ್ಕೆ ಪಡೆದಿಲ್ಲ. ಕೆಲವರನ್ನು ಕರೆಯಿಸಿ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

ಶಂಕಿತ ಉಗ್ರರು ಸ್ಯಾಟಲೈಟ್ ಫೋನ್ ಬಳಸಿದ್ದಾರೆಯೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಕರಾವಳಿ ಭಾಗದಲ್ಲಿ ಹಡಗುಗಳು ಸಂಚರಿಸುವುದರಿಂದ ಅಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಾರೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಶಾರೀಖ್ ಎಲ್ಲೆಲ್ಲಿ ಓಡಾಟ ನಡೆಸಿದ್ದಾನೆ ಎಂಬುದರ ಮಾಹಿತಿ ಆಧಾರದಲ್ಲಿ ಅನೇಕ ತಂಡಗಳನ್ನು ರಚಿಸಿ ಎನ್‌ಐಎ ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಂಕಿತ ಉಗ್ರ ಮತೀನ್‌ಗಾಗಿ ಹುಡುಕಾಟ ನಡೆದಿದೆ ಎಂದರು.