Appu Re-Release: ಕನ್ನಡ ಚಿತ್ರರಂಗದ ಪವರ್ ಸ್ಟಾರ್, ನಟ ಪುನೀತ್ ರಾಜ್ಕುಮಾರ್ ಹೀರೋ ಆಗಿ ನಟಿಸಿದ ಮೊಟ್ಟಮೊದಲ ಸಿನಿಮಾ ‘ಅಪ್ಪು’ ಇಂದು ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರೀ-ರಿಲೀಸ್ ಆಗಿದೆ.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಕಣ್ಮರೆಯಾಗಿದ್ದ ಮಹಿಳೆ ಕಡೆಗೂ ಪ್ರತ್ಯಕ್ಷ! ತಾಯಿ-ಮಗನನ್ನು ಸೇರಿಸಿದ್ದೇ ಅಂತರ್ಜಾಲ | Lost Women
ತಮ್ಮ ಸರಳತೆ, ಸಜ್ಜನಿಕೆ, ನಗುಮುಖದ ಸ್ವಭಾವದಿಂದಲೇ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಬೇರೂರಿ ಕುಳಿತಿರುವ ಪುನೀತ್ ರಾಜ್ಕುಮಾರ್ರನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ ಅನ್ನೋದಕ್ಕೆ ಇಂದಿನ ಅಪ್ಪು ರೀ-ರಿಲೀಸ್ ಚಿತ್ರವೇ ಜ್ವಲಂತ ಸಾಕ್ಷಿ. ಬ್ಲಾಕ್ಬಸ್ಟರ್ ಹಿಟ್ ಚಿತ್ರವನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ನೋಡಿದ ಅಭಿಮಾನಿಗಳು ಮತ್ತು ಸಿನಿಪ್ರಿಯರು ಇದು ಹೊಸ ಚಿತ್ರ ಎಂಬಂತೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದು ವಿಶೇಷ.
ಮಾ.14ರ ಬೆಳಗ್ಗಿನ ಮೊದಲ ಪ್ರದರ್ಶನದ ಚಿತ್ರಮಂದಿರಗಳ ಟಿಕೆಟ್ಗಳು ನಿನ್ನೆಯೇ ಸೋಲ್ಡ್ ಔಟ್ ಆಗಿದ್ದು, ಸ್ಟಾರ್ ನಟನ ಹೊಸ ಸಿನಿಮಾ ನೋಡಲು ಮುಗಿಬೀಳುವ ಅಭಿಮಾನಿಗಳಂತೆ ಪ್ರೇಕ್ಷಕರು ಅಪ್ಪು ರೀ-ರಿಲೀಸ್ ವೀಕ್ಷಿಸಲು ಆಗಮಿಸಿದ್ದಾರೆ. ಚಿತ್ರದ ಟೈಟಲ್ ಕಾರ್ಡ್ ಪ್ರದರ್ಶನವಾಗುತ್ತಿದ್ದಂತೆ ಹೂವು ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಬಳಗ, ಅಪ್ಪು ಅವರ ಫೋಟೋ ಕಂಡು ಭಾವುಕರಾದರು.
ಬೆಂಗಳೂರಿನ ಸಂತೋಷ್, ನರ್ತಕಿ, ವೀರೇಶ್ ಚಿತ್ರಮಂದಿರಗಳು ಸಿನಿಪ್ರಿಯರಿಂದ ತುಂಬಿ ತುಳುಕುತ್ತಿದ್ದು, ಸಂಭ್ರಮ ಮತ್ತು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಮತ್ತೊಂದೆಡೆ, ಅಪ್ಪು ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ಗೆ ನಾಯಕಿಯಾಗಿ ಮಿಂಚಿದ ನಟಿ ರಕ್ಷಿತಾ ಪ್ರೇಮ್ ಕೂಡ ವೀರೇಶ್ ಚಿತ್ರಮಂದಿರಕ್ಕೆ ಆಗಮಿಸಿ, ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ. ರಕ್ಷಿತಾ ಸೇರಿದಂತೆ ಇನ್ನೂ ಅನೇಕ ನಟಿಮಣಿಯರು, ಹಿರಿಯ ಕಲಾವಿದರು ಚಿತ್ರ ನೋಡಿದ್ದಾರೆ.
ರಾಜ್ಯದ ಬಹುತೇಕ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದ ಅಪ್ಪು 2002ರಲ್ಲಿ ತೆರೆಕಂಡು, ಶತದಿನೋತ್ಸವ ಸಂಭ್ರಮ ಕಂಡಿತ್ತು. ಅಂದು ದೊಡ್ಡ ಮಟ್ಟದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಅಪ್ಪು ಚಿತ್ರ ಶತದಿನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಸಂಭ್ರಮಾಚರಣೆ ಕಾರ್ಯಕ್ರಮದ ವಿಡಿಯೋಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.