ನ್ಯೂಸ್

ಮೇಕ್​ ಇನ್​ ಇಂಡಿಯಾ ಪರಿಕಲ್ಪನೆಯಲ್ಲಿ ಸಜ್ಜಾಯ್ತು ಕರೊನಾ ಲಸಿಕೆ; ಮತ್ತೊಂದು ಔಷಧಕ್ಕೆ ದೇಶೀಯ ಮಾನ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟ ಮತ್ತೊಂದು ದೇಶೀಯ ಔಷಧ ಕಂಪನಿ ಕರೊನಾ ಚಿಕಿತ್ಸೆ ಬಳಸಲಾಗುವ ಲಸಿಕೆಯನ್ನು ಭಾರತದಲ್ಲಿಯೇ ತಯಾರಿಸಿದೆ.

ಕರೊನಾ ಚಿಕಿತ್ಸೆಗಾಗಿ ಕೋವಿಫೊರ್​ ಎಂಬ ಚುಚ್ಚುಮದ್ದನ್ನು ತಯಾರಿಸಿರುವುದಾಗಿ ದೇಶೀಯ ಔಷಧ ಕಂಪನಿ ಹೆಟೆರೋ ಭಾನುವಾರ ಘೋಷಿಸಿದೆ. ಇದಕ್ಕೆ ಭಾರತೀಯ ಔಷಧ ಮಹಾನಿಯಂತ್ರಕರು ಪರವಾನಗಿ ನೀಡಿದ್ದಾರೆ ಎಂದು ತಿಳಿಸಿದೆ.

ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಈ ಲಸಿಕೆ ಸಜ್ಜುಗೊಂಡಿರುವುದು ಚಿಕಿತ್ಸೆ ನೀಡಲು ಭಾರಿ ಅನುಕೂಲಕರವಾಗಲಿದೆ. ಶೀಘ್ರವೇ ದೇಶಾದ್ಯಂತ ಚಿಕಿತ್ಸೆ ಲಭ್ಯವಾಗಲಿದೆ ಎಂದು ಕಂಪನಿಯ ಮುಖ್ಯಸ್ಥ ಡಾ. ಬಿ. ಪಾರ್ಥಸಾರಥ ರೆಡ್ಡಿ ಹೇಳಿದ್ದಾರೆ.

ಕೋವಿಫೊರ್​ ಲಸಿಕೆ, ಅಮೆರಿಕದ ರೆಮ್​ಡೆಸಿವಿರ್​ನ ಲಸಿಕೆಯ ಭಾರತೀಯ ಅವತರಣಿಕೆಯಾಗಿದೆ. ಇದನ್ನು ಜನರಿಕ್​ ಔಷಧ ರೂಪದಲ್ಲಿ ಉತ್ಪಾದಿಸಲಾಗಿದೆ. ಈ ಹಿಂದೆ ಕೋವಿಡ್​ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ನೀಡಲು ಭಾರತದಲ್ಲಿ ಶಿಫಾರಸು ಮಾಡಲಾಗಿತ್ತು. ಇದೀಗ ಇದನ್ನು ದೇಶದಲ್ಲಿ ಉತ್ಪಾದಿಸಿ ರೋಗಿಗಳಿಗೆ ಪೂರೈಸಲಾಗುತ್ತಿದೆ.

ನಿನ್ನೆಯಷ್ಟೇ ಮುಂಬೈ ಮೂಲದ ಗ್ಲೆನ್​ ಮಾರ್ಕ್​ ಕಂಪನಿ ಕರೊನಾದಿಂದ ಲಘು ಹಾಗೂ ಸಾಧಾರಣ ಸೋಮಕಿಗೆ ಒಳಗಾದ ರೋಗಿಗಳಿಗೆಂದೇ ಫೆಬಿಫ್ಲೂ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ದೇಶೀಯ ಕಂಪನಿ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದಂತಾಗಿದೆ.