ನ್ಯೂಸ್

ಐಪಿಎಸ್​ ಅಧಿಕಾರಿ ವೈ ಪೂರಣ್ ಕುಮಾರ್ ಕೇಸ್​ನಲ್ಲಿ ಮತ್ತೊಂದು ಟ್ವಿಸ್ಟ್; ಇಂದು ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆ| Suicide

Suicide: ಹರಿಯಾಣ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯ ನಡುವೆಯೇ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು, ಇಂದು(ಅ. 14) ಮತ್ತೊಬ್ಬ ಪೊಲೀಸ್ ಅಧಿಕಾರಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರೋಹ್ಟಕ್‌ನ ಸೈಬರ್ ಸೆಲ್‌ನಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಆಗಿರುವ ಸಂದೀಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವವರು. ಮೃತ ಅಧಿಕಾರಿ ವೈ ಪೂರಣ್ ಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದರು ಎನ್ನಲಾಗಿದ್ದು, ಸಾವಿಗೂ ಮುನ್ನ ವಿಡಿಯೋ ಮಾಡಿರುವ ಸಂದೀಪ್, ಡೆತ್​ನೋಟ್ ಬರೆದಿದ್ದು ಸತ್ಯಕ್ಕಾಗಿ ಪ್ರಾಣವನ್ನೇ ಬಿಡುತ್ತಿದ್ದೇನೆ ಎಂದು ಬರೆದಿದ್ದಾರೆ.

#WATCH | Haryana | A body of a police personnel found under suspicious circumstances in a room built near an agricultural field in Rohtak's Ladhot village pic.twitter.com/1pUjhowsBM

— ANI (@ANI) October 14, 2025

ಮೃತ ವೈ ಪೂರಣ್ ಕುಮಾರ್ ಒಬ್ಬ ಭ್ರಷ್ಟ ಐಪಿಎಸ್​ ಅಧಿಕಾರಿಯಾಗಿದ್ದರು. ತಮ್ಮ ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡರು. ಜಾತಿ ತಾರತಮ್ಯದ ವಿಷಯವನ್ನು ಬಳಸಿಕೊಂಡು ಅವರು ಇಡೀ ವ್ಯವಸ್ಥೆಯನ್ನು ಅಪಹರಿಸಿದ್ದಾರೆ ಎಂದು ಎಂದು ಸಂದೀಪ್ ಕುಮಾರ್ ಆರೋಪಿಸಿದ್ದಾರೆ.

ಭ್ರಷ್ಟಾಚಾರದ ಆರೋಪಗಳು ಬೆಳಕಿಗೆ ಬಂದ ಬಳಿಕ ವೈ ಪೂರಣ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಗನ್‌ಮ್ಯಾನ್ ಮದ್ಯ ಗುತ್ತಿಗೆದಾರರಿಂದ 2.5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಅವರನ್ನು ಹಿಡಿಯಲಾಗಿತ್ತು. ಗ್ಯಾಂಗ್‌ಸ್ಟರ್ ಬೆದರಿಕೆ ಹಾಕಿದ ನಂತರ ಗುತ್ತಿಗೆದಾರ ವೈ ಪೂರಣ್ ಕುಮಾರ್ ಅವರನ್ನು ಭೇಟಿಯಾಗಿದ್ದರು. ಲಂಚದ ಆರೋಪಗಳು ಬೆಳಕಿಗೆ ಬಂದಾಗ ಅದಕ್ಕೆ ಜಾತಿ ಬಣ್ಣ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪೂರಣ್ ಕುಮಾರ್ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪಿ ಕುಮಾರ್ ಅವರ ವಿರುದ್ಧವೂ ಮಾತನಾಡಿರುವ ಸಂದೀಪ್ ಕುಮಾರ್, ತಮ್ಮ ಭ್ರಷ್ಟಾಚಾರ ಬಯಲಾಗಬಹುದು ಎಂಬ ಭಯ ಅವರಿಗೂ ಇದೆ. ಅವರ ಆಸ್ತಿಗಳ ಬಗ್ಗೆ ತನಿಖೆಯಾಗಬೇಕು. ಇದು ಜಾತಿ ಸಮಸ್ಯೆಯಲ್ಲ. ಸತ್ಯ ಹೊರಬರಬೇಕು. ಅವರು ಭ್ರಷ್ಟರಾಗಿದ್ದರು ಎಂದು ಹೇಳಿದ್ದಾರೆ. (ಏಜೆನ್ಸೀಸ್)