ಆನೇಕಲ್: ರಾಜಧಾನಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಯುವಕನೊಬ್ಬ ಹಿಂದೂ ಯುವತಿಗೆ ಸುಳ್ಳು ಹೇಳಿ ಪ್ರೀತಿಯ ನಾಟಕವಾಡಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾನೆ. ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ.
ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಎಂಬಾತನೇ ಆರೋಪಿ. ಮಹಾರಾಷ್ಟ್ರ ಮೂಲದ ಹಿಂದೂ ಯುವತಿ ಸಂತ್ರಸ್ತೆ. ಯುವಕ ರೇಮಂಡ್ಸ್ ರಿಟೇಲ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಕೋರಮಂಗಲದಲ್ಲಿ ವಾಸವಿದ್ದ. ಯುವತಿ ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿದ್ದು, ಬ್ಲ್ಯಾಕ್ ಬೆರಿಸ್ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದಳು.
ಪ್ರಾರಂಭದಲ್ಲಿ ತನ್ನನ್ನು ಕ್ರಿಶ್ಚಿಯನ್ ಎಂದು ಮೆಲ್ವಿನ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ನಂತರ ಪರಿಚಯದ ಸಲಿಗೆ ಮೇಲೆ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಆದರೆ ಒಂದೂವರೆ ವರ್ಷದ ಬಳಿಕ ಆಕಸ್ಮಿಕವಾಗಿ ಆಧಾರ್ ಕಾರ್ಡ್ನಿಂದಾಗಿ ಆತ ಅನ್ಯಕೋಮು ಎಂಬ ನಿಜ ತಿಳಿದ ಯುವತಿ, ಮದುವೆ ಆಗಲು ನಿರಾಕರಿಸಿದ್ದಳು. ಯುವತಿ ಮನೆಯವರು ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಹೀಗಾಗಿ ಇಬ್ಬರ ಮಧ್ಯೆ ಬ್ರೇಕಪ್ ಆಗಿದ್ದರೂ ಈತ ಆಗಾಗ ಯುವತಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ರಾತ್ರಿ ವೇಳೆ ಮನೆ ಬಳಿ ಬಂದು ಗಲಾಟೆ ಮಾಡಿ ಕೊಲೆ ಬೆದರಿಕೆ ಒಡ್ಡುತ್ತಿದ್ದ. ಯುವತಿ ಮತ್ತು ಕುಟುಂಬದವರನ್ನು ಮುಗಿಸುವುದಾಗಿ ಹೆದರಿಸಿದ್ದ. ಮಾತ್ರವಲ್ಲ, ಯುವತಿ ಕೆಲಸ ಮಾಡುತ್ತಿದ್ದ ಸಂಸ್ಥೆಯವರ ಬಳಿ ಇಲ್ಲಸಲ್ಲದ್ದನ್ನು ಹೇಳಿ ಕೆಲಸಕ್ಕೂ ತೊಂದರೆ ಮಾಡಿದ್ದ.
ಯುವತಿ ಕೆಲಸ ಮಾಡುತ್ತಿದ್ದ ಕೋರಮಂಗಲದ ಬ್ಲ್ಯಾಕ್ ಬೆರಿಸ್ ಸ್ಟೋರ್ನ ಸಹೋದ್ಯೋಗಿಗಳು ಅಲ್ ಮೆಹಪ್ಯೂಸ್ ಬರಪೂಯಾ ಜೊತೆ ಕೈಜೋಡಿಸಿದ್ದರು. ಅಲ್ಲಿನ ಮಹಮದ್ ಸಕ್ಲೈನ್, ಸೈಯ್ಯದ್, ಮುಜಿಬ್ ಸೈಫ್ ಶೇಖ್, ಅಸ್ಲಂ ತಬ್ರೆಜ್ ಇವರೆಲ್ಲರ ಕುತಂತ್ರದಿಂದ ಕೆಲಸವೂ ಹೋಯ್ತು. ಕಂಪನಿ ಜಿಎಂ ಸಾಯಾಕ್ ಅರೋರಾ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿ, ಇಲ್ಲಸಲ್ಲದ ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿದ್ದಾರೆ.
ಎಚ್ಆರ್ ಅಂಕುಷ್ ಠಾಕೂರ್, ಎಂಐಎಸ್ ಅವಿನಾಶ್ ವರ್ಮ, ಜಿಎಂ ಸಯಾಕ್ ಆರೋರಾ, ಫ್ರಾಂಚೈಸಿ ಹರೀಶ್ ಅವರು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ನಾಲ್ಕು ಲಕ್ಷ ರೂ. ನೀಡಿ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಇಲ್ಲದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಹೆದರಿಸಿ ಬೆದರಿಸಿ ರಾಜಿನಾಮೆ ಪತ್ರ ನೀಡುವಂತೆ ಒತ್ತಡ ಹೇರುತ್ತಿರುವುದಲ್ಲದೆ, ಸೀನಿಯರ್ಸ್ ಜೊತೆ ಅಫೇರ್ ಇದೆ ಅಂತ ಕುಟುಂಬದವರಿಗೆ ತಿಳಿಸುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂಬುದಾಗಿ ಯುವತಿ ವಂಚಕ ಪ್ರೇಮಿ ಮತ್ತು ಕಂಪನಿ ಆಡಳಿತ ಮಂಡಳಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.