ನ್ಯೂಸ್

ಮತ್ತೊಬ್ಬ ಎಐಎಡಿಎಂಕೆ ನಾಯಕನ ವಿರುದ್ಧ ಅಸಮಾನ ಆಸ್ತಿ ಪ್ರಕರಣ

ಚೆನ್ನೈ: ತಮಿಳುನಾಡಿನ ಮಾಜಿ ಆರೋಗ್ಯ ಮಂತ್ರಿ ಹಾಗೂ ಎಐಎಡಿಎಂಕೆ ಶಾಸಕ ಸಿ.ವಿಜಯಭಾಸ್ಕರ್​ ಮತ್ತು ಅವರ ಪತ್ನಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ(ಡಿವಿಎಸಿ)ವು ಅಸಮಾನ ಆಸ್ತಿ ಪ್ರಕರಣ ದಾಖಲಿಸಿದೆ. 2016 ರಿಂದ 2021 ರವರೆಗಿನ ವೀರಲಿಮಲೈನ ಶಾಸಕರಾಗಿದ್ದ ಅವಧಿಯಲ್ಲಿ 27 ಕೋಟಿ ರೂಪಾಯಿಗೂ ಮೀರಿದ ಆಸ್ತಿಗಳನ್ನು ವಿಜಯಭಾಸ್ಕರ್​ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಚೆನ್ನೈ, ಚೆಂಗಲ್ಪಟ್ಟು, ಕೊಯಮತ್ತೂರು, ತಿರುಚ್ಚಿ, ಪುದುಕೊಟ್ಟೈ ಮತ್ತು ಕಾಂಚೀಪುರಂನಲ್ಲಿರುವ ವಿಜಯಭಾಸ್ಕರ್​ ಮತ್ತು ಅವರ ಕುಟುಂಬಕ್ಕೆ ಸೇರಿದ 43 ಸ್ಥಳಗಳಲ್ಲಿ ಇಂದು ಡಿವಿಎಸಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿಯ ವೇಳೆ, ಅವರು ತಮ್ಮ ಆದಾಯ ಮೂಲಗಳಿಗೆ ವಿಪರೀತವಾಗಿ ಸುಮಾರು ₹27,22,56,736 ಮೌಲ್ಯದ ಆಸ್ತಿಗಳನ್ನು ಗಳಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಎಐಎಡಿಎಂಕೆಯ ಮಾಜಿ ಸಚಿವರಾದ ಎಂ.ಆರ್​.ವಿಜಯಭಾಸ್ಕರ್​, ಎಸ್.ಪಿ,ವೇಲುಮಣಿ ಮತ್ತು ಕೆ.ಸಿ.ವೀರಮಣಿ ಅವರ ವಿರುದ್ಧವೂ, ಡಿವಿಎಸಿ, ಈ ಮುನ್ನ ಇದೇ ತೆರನ ದಾಳಿಗಳನ್ನು ನಡೆಸಿ, ಭಷ್ಟಾಚಾರದ ಆರೋಪಗಳನ್ನು ದಾಖಲಿಸಿದೆ.  (ಏಜೆನ್ಸೀಸ್)