| ಪ್ರಶಾಂತ ರಿಪ್ಪನ್ಪೇಟೆ
ಸಾಮಾಜಿಕ, ಧಾರ್ವಿುಕ, ಸಾಹಿತ್ಯಿಕ, ಐತಿಹಾಸಿಕ ನೆಲೆಯಲ್ಲಿ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವು ಪ್ರತಿ ವರ್ಷ ಫಾಲ್ಗುಣ ಶುದ್ಧ ತ್ರಯೋದಶಿಯಂದು ನಡೆಯುತ್ತದೆ. ಬಹುದಿನಗಳ ಬೇಡಿಕೆಯಂತೆ ಸರ್ಕಾರ ಅಧಿಕೃತವಾಗಿ ರೇಣುಕಾಚಾರ್ಯ ಜಯಂತಿ ಆಚರಣೆಗೆ ಆದೇಶಿಸಿದ್ದು, ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜಯಂತಿ ನಡೆಯಲಿದೆ. ಅಂತೆಯೇ ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಕೂಡ ಮಾ. 3ರಿಂದ ಮಾ. 7ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.3 ರಂದು ಧ್ವಜಾರೋಹಣದೊಂದಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರೆಯಲಿದ್ದು, ಅದೇ ದಿನ ಹರಿದ್ರಾಲೇಪನ ನಡೆಯಲಿದೆ. ಮಾ. 4ರಂದು ದೀಪೋತ್ಸವ-ಕುಂಕುಮೋತ್ಸವ, ಹಾಗೂ ಗೋತ್ರಪುರುಷನಾದ ವೀರಭದ್ರಸ್ವಾಮಿಯ ಚಿಕ್ಕ ರಥೋತ್ಸವ ನಡೆಯಲಿದೆ. ಅಂದು ಸಂಜೆ ಶ್ರೀ ವೀರಭದ್ರಸ್ವಾಮಿ ವಿಜಯೋತ್ಸವ ಹಾಗೂ ಜಾನಪದ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾ. 5ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿಯ ಮಹಾರಥೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಾ. 6ರಂದು ಶಯನೋತ್ಸವ, ಕೆಂಡಾರ್ಚನೆ, ಶಿವಾನಂದ ಎಸ್ಟೇಟ್ನಲ್ಲಿ ಪೂಜಾ-ಪ್ರಸಾದ ಹಾಗೂ ನೇಗಿಲಯೋಗಿಯ ನೆನಹು ಕಾರ್ಯಕ್ರಮ ನಡೆಯಲಿವೆ. ಮಾ. 7ರಂದು ವಸಂತೋತ್ಸವ ಹಾಗೂ ಭದ್ರಾನದಿ ತೀರದಲ್ಲಿ ಸುರಗಿ ಸಮಾರಾಧನೆಯ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಇದನ್ನೂ ಓದಿ: ಮಧ್ಯಂತರ ಪರಿಹಾರಕ್ಕೆ ಅಂಕಿತ: ಮೂಲ ವೇತನದ ಶೇ.17 ಹೆಚ್ಚಳ; ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ನಿವೃತ್ತರಿಗೂ ಅನ್ವಯ
ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ - ಪ್ರತಿಮೆ: ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶಗಳನ್ನು ಶಾಶ್ವತವಾಗಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಆ ನಿಟ್ಟಿನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರಮುಖವಾದದ್ದು. ಕಳೆದ 22 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ನಾಡಿನ ಅತ್ಯುನ್ನತ ಸಾಧಕರಿಗೆ ನೀಡಲಾಗುತ್ತದೆ. ಸಾಹಿತಿಗಳು, ಕಲಾವಿದರು, ಸ್ವಾಮೀಜಿಗಳು, ವೈದ್ಯರು, ವಿವಿಧ ಗಣ್ಯರಿಗೆ ಈವರೆಗೆ ನೀಡಿರುವ ಪ್ರಶಸ್ತಿಗೆ ಈ ಬಾರಿ ನಾಡಿನ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಆಯ್ಕೆ ಮಾಡಲಾಗಿದೆ. ಸದಾ ಅಭಿವೃದ್ಧಿಯ ಮಂತ್ರ ಪಠಿಸುತ್ತ, ನಾಡಿನ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಠ-ಮಾನ್ಯಗಳ ಸೇವೆಯನ್ನು ಪರಿಗಣಿಸಿ ಮೊಟ್ಟ ಮೊದಲ ಬಾರಿಗೆ ಅನುದಾನವನ್ನು ನೀಡಿದ ಯಡಿಯೂರಪ್ಪನವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಇದನ್ನೂ ಓದಿ: ಬಿಎಂಆರ್ಸಿಎಲ್ ಅವ್ಯವಹಾರ-ದುರಾಡಳಿತ ತನಿಖೆಗೆ ಆಗ್ರಹ; ಸಂಸ್ಥೆಯ ಮಾಜಿ ಅಧಿಕಾರಿಯಿಂದಲೇ ಮುಖ್ಯಮಂತ್ರಿಗೆ ಪತ್ರ
ಇದೇ ವೇಳೆ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶಗಳನ್ನು ಸಾರುವುದಕ್ಕಾಗಿ ರಂಭಾಪುರಿ ಪೀಠದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಥೀಮ್ ಪಾರ್ಕ್ನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ 51 ಅಡಿ ಎತ್ತರದ ಬೃಹತ್ ಶಿಲಾಮೂರ್ತಿಯ ಕಾರ್ಯಾರಂಭದ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.5ರಂದು ನೆರವೇರಿಸಲಿದ್ದಾರೆ. ಜತೆಗೆ ರಂಭಾಪುರಿ ಮೂಲ ಪೀಠದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಬಿ.ಎಸ್. ಯಡಿಯೂರಪ್ಪ ನೆರವೇರಿಸಲಿದ್ದಾರೆ.