ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಮೈಸೂರು ಅರಸರ ಒಡೆತನದ ಅರಮನೆ ಮೈದಾನದ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಸುಪ್ರಿಂಕೋರ್ಟ್ ಆದೇಶದಂತೆ ಸ್ವತ್ತಿನ ಮಾಲೀಕರಿಗೆ 3 ಸಾವಿರ ಕೋಟಿ ರೂ. ಮೌಲ್ಯದ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಕೊಡುವುದನ್ನು ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಪ್ರಯೋಗಿಸಿದೆ. ಶುಕ್ರವಾರ ನಡೆದ ತುರ್ತು ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ತರುವ ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಅಧಿಕಾರಿಗಳು ತಕ್ಷಣ ರಾಜಭವನಕ್ಕೆ ತೆರಳಿ ಸಂಪುಟ ಸಭೆಯ ನಿರ್ಣಯವನ್ನು ರಾಜ್ಯಪಾಲರಿಗೆ ತಲುಪಿಸಿದರು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಸಭೆಯ ಬಳಿಕ ಸಂಪುಟದ ನಿರ್ಧಾರವನ್ನು ಸುದ್ದಿಗಾರರ ಮುಂದಿಟ್ಟರು. ಬೆಂಗಳೂರು ಅರಮನೆ (ಅರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ಕ್ಕೆ ಸಂಬಂಧಿಸಿದ ಸಿವಿಲ್ ಅಪೀಲುಗಳು ಸವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇದೆ.
ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ವಿತರಿಸದಿದ್ದಲ್ಲಿ ರಾಜ್ಯದ ಹಿತಾಸಕ್ತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಈ ಕಾರಣಕ್ಕೆ ಅರಮನೆ ಮೈದಾನದ ಜಾಗ ಬಳಸಿಕೊಳ್ಳಲು ಮತ್ತು ನಿಯಂತ್ರಿಸುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ತೀರ್ವನಿಸಿದೆ ಎಂದರು.
ಅನಿವಾರ್ಯತೆ ಏನಿತ್ತು?: ಅರಮನೆ ಮೈದಾನದ 472.16 ಎಕರೆ ಜಾಗಕ್ಕೆ ಬೆಂಗಳೂರು ಅರಮನೆ (ಅರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8 ಮತ್ತು 9ರಲ್ಲಿ ಪರಿಹಾರವಾಗಿ 11 ಕೋಟಿ ರೂ. ನಿಗದಿಗೊಳಿಸಲಾಗಿತ್ತು. ಈ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ರಾಜ್ಯ ಉಚ್ಚ ನ್ಯಾಯಾಲಯ ಎತ್ತಿಹಿಡಿದಿತ್ತು. ಬಳಿಕ ಅರಮನೆ ಉತ್ತರಾಧಿಕಾರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅರ್ಜಿ ಹಾಕಿದ್ದರು. ಆದರೆ 1996ರ ಈ ಕಾಯ್ದೆಗೆ ಸವೋಚ್ಚ ನ್ಯಾಯಾಲಯದಿಂದ ಯಾವುದೇ ತಡೆಯಾಜ್ಞೆ ಬಿದ್ದಿರಲಿಲ್ಲ. ಇಷ್ಟರ ನಡುವೆ 2024ರ ಡಿ.10ರಂದು ಸವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಮತ್ತು ಇತರ ಪ್ರಕರಣಗಳಲ್ಲಿ ಕರ್ನಾಟಕ ಸ್ಟಾಂಪ್ ಕಾಯ್ದೆ ಸೆಕ್ಷನ್ 45ಬಿ ಗೆ ಅನುಗುಣವಾಗಿ ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಹ ಪ್ರದೇಶಗಳಿಗೆ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಬೆಂಗಳೂರು ಅರಮನೆ ಜಾಗವನ್ನು ಮೌಲ್ಯೀಕರಿಸಿ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡುವಂತೆ ಕೋರ್ಟ್ ನಿರ್ದೇಶಿಸಿತು.
ಎಕರೆಗೆ 200 ಕೋಟಿ!: ಕೇವಲ 2 ಕಿ.ಮೀ ರಸ್ತೆ ಅಭಿವೃದ್ಧಿಗೆ 3014.00 ಕೋಟಿ ರೂ. ಅಂದರೆ ಪ್ರತಿ ಎಕರೆಗೆ 200 ಕೋಟಿ ರೂ. ಪರಿಹಾರ ನೀಡಿದರೆ ಆರ್ಥಿಕ ಪರಿಸ್ಥಿತಿ ಗಂಡಾಂತರ ಉಂಟಾಗಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ವಣವಾಗದೆ ಪ್ರಗತಿ ವಿರೋಧವಾದ ಕ್ರಮವಾಗುತ್ತದೆ ಎಂದು 1996ರ ಕಾಯ್ದೆಗೆ ಪೂರಕವಾದ ಈ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಮಂಡಿಸಲು ಸಂಪುಟ ಸಭೆ ತೀರ್ವನಿಸಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
ದುಬಾರಿ ಹೊರೆ: 2011ರಲ್ಲಿ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ ಆಸ್ತಿಯ 15 ಎಕರೆ 39 ಗುಂಟೆ ಜಾಗ ಬಳಸಿಕೊಂಡು ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆ ಅಗಲೀಕರಣಗೊಳಿಸುವ ಸಂಬಂಧ ಮಧ್ಯಂತರ ಅರ್ಜಿ ದಾಖಲಿಸಲಾಯಿತು. ಇದರ ವಿಚಾರಣೆ ನಡೆಸಿದ ಸವೋಚ್ಚ ನ್ಯಾಯಾಲಯ 2014 ರಲ್ಲಿ ಟಿಡಿಆರ್ ನಿಯಮಗಳ ಪ್ರಕಾರ ಟಿಡಿಆರ್ ಷರತ್ತಿಗೊಳಪಡಿಸಿ, ಜಾಗವನ್ನು ಬಳಸಿಕೊಳ್ಳಲು ಅನುಮತಿ ನೀಡಿತು. ಆ ಪ್ರಕಾರ 3 ಸಾವಿರ ಕೋಟಿ ರೂ. ಮೊತ್ತದ ಟಿಡಿಆರ್ ಅನ್ನು ಅರಮನೆ ವಾರಸುದಾರರಿಗೆ ನೀಡಬೇಕಾಗುತ್ತದೆ. ಈ ಭೂಮಿಗೆ ಅಷ್ಟೊಂದು ಮೊತ್ತದ ವೆಚ್ಚ ಮಾಡಬೇಕೇ? ಎಂಬ ಪ್ರಶ್ನೆ ಎದುರಾಗುತ್ತದೆ. ಅಲ್ಲದೇ ಅರಮನೆ ಜಾಗದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವ ಕಾರಣ ಜಾಗದ ಮೇಲೆ ಹಕ್ಕು ಸಾಧಿಸಲು ಸುಗ್ರೀವಾಜ್ಞೆಯ ಮೊರೆ ಹೋಗಲಾಗಿದೆ.
ಸರ್ಕಾರ- ಅರಮನೆ ಸಮರ: ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನದ ಸ್ಥಳ ಹೊರತುಪಡಿಸಿ ಪರ್ಯಾಯ ಅವಕಾಶವನ್ನು ಸರ್ಕಾರ ಹುಡುಕಿಕೊಂಡಿದೆ. ಟನಲ್ ರಸ್ತೆ ವಿಚಾರವಾಗಿ ಸಂಪುಟ ಸಭೆಯಲ್ಲಿ ಅನೌಪಚಾರಿಕ ಚರ್ಚೆಯೂ ನಡೆದಿದೆ. ಇಷ್ಟರ ನಡುವೆಯೂ ಅರಮನೆ ಸ್ವತ್ತಿನ ಮೇಲೆ ಹಕ್ಕು ಸಾಧಿಸಲು ಸುಗ್ರೀವಾಜ್ಞೆ ಅಸ್ತ್ರ ಪ್ರಯೋಗಿಸಿದೆ. ಜ.16ರ ಸಂಪುಟ ಸಭೆಯಲ್ಲಿ ಮೂಲ ವ್ಯಾಜ್ಯದ ಅನ್ವಯ ಆ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ಇತ್ತು, ಆದರೆ ರಾಜಮನೆತನ ಅಲ್ಲಿ ಸಾಕಷ್ಟು ಕಟ್ಟಡ ನಿರ್ವಿುಸಿ ಬಾಡಿಗೆ ಪಡೆಯುತ್ತಿದ್ದು, ಅವುಗಳನ್ನ ತೆರವು ಮಾಡುವಂತೆ 2025ರ ಜ.9 ರಂದು ಮೈಸೂರು ರಾಜರ ಉತ್ತರಾಧಿಕಾರಿಗೆ ನೋಟಿಸ್ ನೀಡಲಾಗಿದೆ. ಜತೆಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸರ್ಕಾರ
ಸರ್ಕಾರದ ವಾದವೇನು?
ಸುಗ್ರೀವಾಜ್ಞೆ ಪರಿಣಾಮ
ಸವೋಚ್ಚ ನ್ಯಾಯಾಲಯ ನಿಗದಿಪಡಿಸಿರುವ ಭೂಸ್ವಾಧೀನ ಮೊತ್ತ ರಾಜ್ಯದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೊರಿಸಲಿದೆ. ಆರ್ಥಿಕ ಶಿಸ್ತಿನ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿಯೇ ಸುಗ್ರೀವಾಜ್ಞೆ ಹೊರಡಿಸಲಾಗುತ್ತಿದೆ.
| ಎಚ್.ಕೆ.ಪಾಟೀಲ ಕಾನೂನು ಸಚಿವ