ನ್ಯೂಸ್

ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡ್ತಾರೆ… ಬರೀ ಮೊಸರನ್ನ ತಿಂತಾರೆ; ಅನಿತಾ ಕುಮಾರಸ್ವಾಮಿ

ರಾಮನಗರ: "ಅವರು ಊಟದ ವಿಚಾರದಲ್ಲಿ ಮಕ್ಕಳ ರೀತಿ ಹಠ ಮಾಡುತ್ತಾರೆ. ಬರೀ ಮೊಸರನ್ನ ತಿನ್ನುತ್ತಾರೆ. ಹೆಚ್ಚು ನೀರು ಕುಡಿಯುವುದಿಲ್ಲ, ಸರಿಯಾಗಿ ಊಟ ಮಾಡಲ್ಲ. ಹೀಗಾಗಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಸದ್ಯ ಚೇತರಿಸಿಕೊಂಡಿದ್ದಾರೆ" ಎಂದು ಎಚ್.ಡಿ.ಕುಮಾರಸ್ವಾಮಿ ಅವರ ಅನಾರೋಗ್ಯದ ಬಗ್ಗೆ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

ನಿರಂತರ ಪ್ರಚಾರದಿಂದ ಆಯಾಸ

ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಮಾತನಾಡುತ್ತಾ, ಕುಮಾರಸ್ವಾಮಿ ರಾಜ್ಯದ ಹಲವೆಡೆ ಪ್ರಚಾರ ಮಾಡಿದ್ದರು. ಇದರಿಂದ ಆಯಾಸ ಉಂಟಾಗಿ, ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹೀಗಾಗಿ ನಾನು ಚನ್ನಪಟ್ಟಣದಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿದರು.

ಜನರು ಬುದ್ದಿವಂತರು

ಚನ್ನಪಟ್ಟಣದಾದ್ಯಂತ ಪ್ರಚಾರ ಮಾಡುತ್ತಿದ್ದು, ಕ್ಷೇತ್ರದ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಅಲ್ಲದೇ ಇಲ್ಲಿನ ಜನರು ಬುದ್ಧಿವಂತರಾಗಿದ್ದು, ಕುಮಾರಸ್ವಾಮಿ ಅವರನ್ನು ಅರ್ಥ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಅವರು ಗೆದ್ದರೆ ಕ್ಷೇತ್ರಕ್ಕೆ ನಿರಂತರ ಅನುದಾನ ಸಿಗುತ್ತದೆ. ಹೀಗಾಗಿ ಮತ್ತೊಮ್ಮೆ ಅವಕಾಶ ಕೊಡಿ ಎಂದು ಮತದಾರರಲ್ಲಿ ವಿನಂತಿಸಿಕೊಂಡರು.

ಪ್ರಧಾನಿಗೆ ಸ್ವಾಗತ

ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ದೇಶದ ಪ್ರಧಾನಿಯಾಗಿದ್ದು, ಗೌರವ ಇದೆ. ಅವರ ಪ್ರಚಾರ ಮಾಡಿದರೂ ಜನತೆಗೆ ಎಲ್ಲಾ ಗೊತ್ತಿದೆ. ಅವರು ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಚನ್ನಪಟ್ಟಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿರುವುದಕ್ಕೆ ಸ್ವಾಗತ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.