ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರ ಮತ ಎಚ್‌.ಡಿ.ದೇವೇಗೌಡ ಹಾಗೂ ಜಿ.ಟಿ.ದೇವೇಗೌಡರಿಗೆ ಮೀಸಲಿದೆ; ಎಚ್​​ಡಿಕೆ

HD Kumaraswamy (1)
ಸಾಂದರ್ಭಿಕ ಚಿತ್ರ
Published on

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಒಕ್ಕಲಿಗರು ಎಚ್‌.ಡಿ.ದೇವೇಗೌಡ ಹಾಗೂ ಜಿ.ಟಿ.ದೇವೇಗೌಡರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ. ಹೀಗಿರುವಾಗ ಯಾವುದೇ ಕಾರಣಕ್ಕೂ ಒಕ್ಕಲಿಗರ ಮತ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಬಾರಿ ಜಿ.ಟಿ.ದೇವೇಗೌಡ ಅವರು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಮುದಾಯದ ಪ್ರತಿನಿಧಿ ಅಲ್ಲ

ಲಿಂಗಾಯತ ಸಿಎಂ ಹೇಳಿಕೆ ವಿಚಾರ‌ವಾಗಿ ಪ್ರತಿಕ್ರಿಯಿಸುತ್ತಾ, ಮುಖ್ಯಮಂತ್ರಿ ಸಮುದಾಯದ ಪ್ರತಿನಿಧಿ ಅಲ್ಲ, ನಾಡಿನ ಪ್ರತಿನಿಧಿ. ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ. ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯ ಪಕ್ಷಗಳು ನಾಯಕರನ್ನು ಆಯ್ಕೆ ಮಾಡುತ್ತವೆ. ನಾಡಿನ ಹಿತದೃಷ್ಟಿ ಇಟ್ಟುಕೊಂಡು ಮುಖ್ಯಮಂತ್ರಿ ಕೆಲಸ ಮಾಡಬೇಕು ಎಂದು ಎಚ್​ಡಿಕೆ ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಅನುಭವಿ ರಾಜಕಾರಣಿ

ಲಿಂಗಾಯತ ಸಮುದಾಯದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಅವರೊಬ್ಬ ಅನುಭವಿ ರಾಜಕಾರಣಿಯಾಗಿದ್ದು, ಅವರ ಬಾಯಲ್ಲಿ ಯಾಕೆ ಆ ರೀತಿಯ ಮಾತು ಬಂತು ಎಂಬುದು ಗೊತ್ತಿಲ್ಲ. ಯಾವ ಅರ್ಥದಲ್ಲಿ ಆ ಮಾತು ಹೇಳಿದ್ದರೋ ಗೊತ್ತಿಲ್ಲ. ಬಹುಶಃ ಕಾಂಗ್ರೆಸ್ ಮುಗಿಸಬೇಕು ಎಂದು ಆ ರೀತಿ ಹೇಳಿರಬಹುದು. ಭ್ರಷ್ಟಾಚಾರ ವಿಚಾರ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಎಚ್.ಡಿ,ಕುಮಾರಸ್ವಾಮಿ ಹೇಳಿದರು.

ಕೇಂದ್ರ ನಾಯಕರಿಗೂ ಕನ್ನಡ ನಾಡಿಗೂ ಏನು ಸಂಬಂಧ?

ಅಮಿತ್ ಷಾ ಮೈಸೂರು ಭಾಗದಲ್ಲಿ ರೋಡ್ ಶೋ ನಡೆಸಿದಾಕ್ಷಣ ಬಿಜೆಪಿಗೆ ಮತ ಬೀಳುವುದಿಲ್ಲ. ಅಮಿತ್ ಷಾ ಅವರ ಕಾರ್ಯಕ್ರಮ ನೋಡಿದ್ದೇನೆ. ಅವರು ರೋಡ್ ಶೋ ಮಾಡಿದಾಕ್ಷಣ ಭದ್ರಕೋಟೆಗೆ ಲಗ್ಗೆ ಹಾಕಿದರು ಎನ್ನುವ ಭಯ ಬೇಡ. ನಮಗೆ ಸಿಕ್ಕ ಸ್ಪಂದನೆ ಬಿಜೆಪಿ, ಕಾಂಗ್ರೆಸ್ ಗೆ ಸಿಗುವುದಿಲ್ಲ. ಮುಂದಿನ 15 ದಿನಗಳ ಪ್ರಚಾರದಲ್ಲಿ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ. ಕೇಂದ್ರ ನಾಯಕರು ಬರುತ್ತಾರೆ, ಹೋಗುತ್ತಾರೆ. ಅವರಿಗೂ ಕನ್ನಡ ನಾಡಿಗೂ ಸಂಬಂಧ ಏನಿದೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net