ನ್ಯೂಸ್

500ರಿಂದ 1 ರೂಪಾಯಿಗೆ ಕುಸಿದಿದ್ದ ಅನಿಲ್​ ಅಂಬಾನಿ ಕಂಪನಿ ಷೇರು: ಈಗ ಭಾರೀ ಬೇಡಿಕೆ, ಅಪ್ಪರ್​ ಸರ್ಕ್ಯೂಟ್​ ಹಿಟ್ ಆಗಿದ್ದೇಕೆ?

ಮುಂಬೈ: ಅನಿಲ್ ಅಂಬಾ ಅನ್ನಿ ಅವರ ಕಂಪನಿ ರಿಲಯನ್ಸ್ ಪವರ್ ಷೇರುಗಳು ಬುಲಿಷ್ ಆಗಿಯೇ ಉಳಿದಿವೆ. ರಿಲಯನ್ಸ್ ಪವರ್ ಷೇರುಗಳು ಸತತ ಎರಡನೇ ದಿನವೂ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗಿವೆ. ಸೋಮವಾರ ಶೇ. 5ರಷ್ಟು ಏರಿಕೆಯೊಂದಿಗೆ ಕಂಪನಿಯ ಷೇರುಗಳ ಬೆಲೆ ರೂ. 23.23ಕ್ಕೆ ತಲುಪಿದೆ. ರಿಲಯನ್ಸ್ ಪವರ್ ಷೇರುಗಳು ಶುಕ್ರವಾರವೂ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗಿದ್ದವು. ಕಳೆದ 3 ವಹಿವಾಟು ದಿನಗಳಲ್ಲಿ ಈ ಷೇರಿನ ಬೆಲೆ 14% ಏರಿಕೆಯಾಗಿದೆ.

ಈ ಹಿಂದೆ ಈ ಷೇರುಗಳ ಬೆಲೆ ಗರಿಷ್ಠ ಮಟ್ಟದಿಂದ 1 ರೂ. ತಲುಪಿ, 99 ಪ್ರತಿಶತಕ್ಕಿಂತ ಹೆಚ್ಚು ಕುಸಿದಿದ್ದವು. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 499.74 ಹಾಗೂ ಕನಿಷ್ಠ ಬೆಲೆ 1 ರೂ. ಇದೆ. ಕಳೆದ ಕೆಲವು ವರ್ಷಗಳಲ್ಲಿ, ಕಂಪನಿಯ ಷೇರುಗಳಲ್ಲಿ ಉತ್ತಮ ಏರಿಕೆ ಕಂಡುಬಂದಿದ್ದು, ಷೇರುಗಳ ಬೆಲೆ ರೂ 23 ದಾಟಿದೆ.

ಕಂಪನಿ ಮತ್ತು ಅದರ ಪ್ರವರ್ತಕ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮಾರ್ಚ್ 14, 2024 ರಂದು ICICI ಬ್ಯಾಂಕ್ ಲಿಮಿಟೆಡ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ರಿಲಯನ್ಸ್ ಪವರ್ ಹೇಳಿದೆ. ಕಂಪನಿಯ ಎಲ್ಲಾ ಸಾಲ ಸಂಬಂಧಿತ ಬಾಧ್ಯತೆಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಒಪ್ಪಂದದ ನಂತರ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಷೇರುಗಳು ಕೂಡ ಉತ್ತಮ ಏರಿಕೆ ಕಂಡಿವೆ. ರಿಲಯನ್ಸ್ ಇನ್‌ಫ್ರಾ ಷೇರುಗಳು ಶುಕ್ರವಾರ ಶೇ. 10 ಕ್ಕಿಂತ ಹೆಚ್ಚು ಏರಿಕೆ ಕಂಡು 237.25 ರೂ. ತಲುಪಿದವು. ಈ ಕಂಪನಿಯ ಷೇರುಗಳ ಬೆಲೆ ಸೋಮವಾರ 4 ಪ್ರತಿಶತಕ್ಕಿಂತ ಹೆಚ್ಚು ಏರಿಕೆ ಕಂಡು 247.10 ರೂ.ತಲುಪಿದೆ.

ಮಾರ್ಚ್ 27, 2020 ರಂದು ಈ ಕಂಪನಿಯ ಷೇರುಗಳ ಬೆಲೆ ರೂ 1.13 ತಲುಪಿತ್ತು. ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಪವರ್ ಷೇರುಗಳಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳು ಮಾರ್ಚ್ 18, 2024 ರಂದು ರೂ 23.23 ತಲುಪಿದೆ. ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಪವರ್ ಷೇರುಗಳು ಶೇ. 1955ರಷ್ಟು ಏರಿಕೆ ಕಂಡಿವೆ. ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ 33.10 ರೂ. ಇದೆ. ಕಂಪನಿಯ ಷೇರುಗಳ 52 ವಾರಗಳ ಕನಿಷ್ಠ ಮಟ್ಟವು 9.05 ರೂ. ಇದೆ.