ನ್ಯೂಸ್

ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ!

ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಸ್ಕಿಲ್​ ಹಗರಣ ಸಂಬಂಧ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಆಂಧ್ರದ ಹೈಕೋರ್ಟ್​ ಸೂಚನೆ ಮೇರೆಗೆ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು, ಆಂಧ್ರದ ನಂದ್ಯಾಲದಲ್ಲಿ ಶನಿವಾರ ಮುಂಜಾನೆ ಬಂಧನ ಮಾಡಿದ್ದಾರೆ.

ಸ್ಕಿಲ್ ಡೆವಲಪ್​ಮೆಂಟ್ ಕಾರ್ಪೊರೇಷನ್​​​ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರು ಎ1 ಆರೋಪಿಯಾಗಿದ್ದಾರೆ. ಅವರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ಕಿಲ್​ ಡೆವಲಪ್​ಮೆಂಟ್​ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. 58 ಕೋಟಿ ರೂ. ಯೋಜನಾ ವೆಚ್ಚವನ್ನು ದಿಢೀರನೇ 370 ಕೋಟಿ ರೂ.ಗೆ ಏರಿಸಿರುವ ಆರೋಪ ಕೇಳಿಬಂದಿದೆ.

ಇಂದು ಬೆಳಗ್ಗೆ ನಂದ್ಯಾಲ ವಲಯದ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದ ಪೊಲೀಸ್​ ತಂಡ ಬೆಳಗ್ಗೆ 3 ಗಂಟೆ ಸುಮಾರಿಗೆ ಚಂದ್ರಬಾಬು ನಾಯ್ಡು ಅವರನ್ನು ಬಂಧನ ಮಾಡಿದೆ. ಆರಂಭದಲ್ಲಿ ಭಾರೀ ವಿರೋಧ ವ್ಯಕ್ತಪಡಿಸಿದ ಚಂದ್ರಬಾಬು ನಾಯ್ಡು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡ ಪೊಲೀಸರು ವಿಜಯವಾಡಗೆ ತೆರಳಿದರು. (ಏಜೆನ್ಸೀಸ್​)