ನ್ಯೂಸ್

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ ನಿಧನ

ಆಂಧ್ರಪ್ರದೇಶ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಕರ್ನಾಟಕದ ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರು ಇಂದು ಹೈದರಾಬಾದ್​ನಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಯಾವುದಕ್ಕೂ ಸ್ಪಂದಿಸದ ಸ್ಥಿತಿಯಲ್ಲಿದ್ದ ರೋಸಯ್ಯ ಅವರನ್ನು ಇಂದು ಬೆಳಗ್ಗೆ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬೆಳಗ್ಗೆ 8.20ರ ಸುಮಾರಿಗೆ ಅವರು ಕೊನೆಯುಸಿರೆಳೆದರು.

ತಮಿಳುನಾಡು ರಾಜ್ಯಪಾಲರಾಗಿದ್ದ ರೋಸಯ್ಯ, ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯಪಾಲರಾಗಿಯೂ ಕೆಲ ತಿಂಗಳ ಕಾಲ ಜವಾಬ್ದಾರಿ ನಿರ್ವಹಿಸಿದ್ದರು.ರೋಸಯ್ಯ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ತೆಲಂಗಾಣ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.

ನಾವಿಬ್ಬರೂ ಮುಖ್ಯಮಂತ್ರಿ ಆಗಿದ್ದಾಗ ಪರಸ್ಪರ ಸಂಪರ್ಕಿಸಿದ್ದೆವು. ಬಳಿಕ ಅವರು ರಾಜ್ಯಪಾಲರಾದರು. ಸಾರ್ವಜನಿಕ ಸೇವೆಗೆ ಅವರ ಕೊಡುಗೆ ಸ್ಮರಣೀಯವಾದುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.