ನ್ಯೂಸ್

ಅಂಬಾನಿ ಮಗನ ಮದುವೆಗೆ ಬಾಂಬ್​ ಬೆದರಿಕೆ ಹಾಕಿದ ಇಂಜಿನಿಯರ್​ ಅರೆಸ್ಟ್​; ಪೊಲೀಸರು ಹೇಳಿದ್ದಿಷ್ಟು

ಮುಂಬೈ: ವಿಶ್ವದ ಟಾಪ್​ ಮೋಸ್ಟ್ ಬಿಲೇನಿಯರ್​ಗಳಲ್ಲಿ ಒಬ್ಬರಾದ ಮುಕೇಶ್​-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಅವರ ಮದುವೆ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್​ ಕನ್ವೆಂಷನ್​ ಸೆಂಟರ್​ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ವಿಶ್ವದಾದ್ಯಂತದ ಸೆಲೆಬ್ರಿಟಿಗಳು, ರಾಜಕಾರಣಿಗಳು, ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದ ವ್ಯಕ್ತಿಗಳು ಮತ್ತು ದೇಶದ ಬಹುತೇಕ ಎಲ್ಲಾ ಪ್ರಮುಖರು ಭಾಗಿಯಾಗಿದ್ದರು.

ಈ ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳದಲ್ಲಿ ಬಾಂಬ್​ ಇಟ್ಟಿರುವ ಕುರಿತು ಬೆದರಿಕೆ ಹಾಕಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಂಬ್​ ಬೆದರಿಕೆಯನ್ನು ಹಾಕಿದ ಆರೋಪಿಯನ್ನು ಬಂಧಿಸಿದ್ದು, ಈತನನ್ನು ವಿರಾಲ್​ ಷಾ ಎಂದು ಗುರುತಿಸಲಾಗಿದೆ. ಬಂಧಿತನು ಗುಜರಾತ್​ನ ವಡೋದರಾ ನಿವಾಸಿ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಡೋದರಾ ಪೊಲೀಸ್​ ಆಯುಕ್ತ ನರಸಿಂಹ ಕುಮಾರ್, ಬಂಧಿತನ ಹೆಸರು ವಿರಾಲ್​ ಷಾ ಎಂದು ತಿಳಿದು ಬಂದಿದ್ದು, ಈತ ವೃತ್ತಿಯಲ್ಲಿ ಇಂಜಿನಿಯರ್​ ಆಗಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈತನನ್ನು ವಡೋದರಾದಿಂದ ಪೊಲೀಸರು ಮುಂಬೈಗೆ ಕರೆದೊಯ್ದಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು. ಯಾವ ಕಾರಣಕ್ಕಾಗಿ ಆತ ಬೆದರಿಕೆ ಹಾಕಿದೆ ಎಂಬುದು ತಿಳಿದಿಲ್ಲ. ತನಿಖೆ ಬಳಿಕ ಎಲ್ಲವೂ ತಿಳಿಯಲಿದೆ ಎಂದು ವಡೋದರಾ ಪೊಲೀಸ್​ ಆಯುಕ್ತ ನರಸಿಂಹ ಕುಮಾರ್​ ಮಾಜಿತಿ ನೀಡಿದ್ದಾರೆ.

ಅಂಬಾನಿ ಮದುವೆಯಲ್ಲಿ ಬಾಂಬ್ ಸಿಡಿದ ನಂತರ ನಾಳೆ ಅರ್ಧ ಜಗತ್ತು ತಲೆಕೆಳಗಾಗುತ್ತದೆ ಎಂದು ನನ್ನ ಮನಸ್ಸು ಹೇಳುತ್ತಿದೆ ಎಂದು ವಿರಾಲ್​ ಷಾ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದ. ಈ ಪೋಸ್ಟ್​ನ ನಂತರ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಸುತ್ತ ಭದ್ರತೆಯನ್ನು ಹೆಚ್ಚಿಸಿದ್ದರು ಮತ್ತು ಪ್ರಕರಣ ದಾಖಲಿಸಿಕೊಂಡು ಟ್ವೀಟ್​ ಮಾಡಿದ್ದವನನ್ನು ಹುಡುಕಲು ವಿಶೇಷ ತಂಡ ರಚಿಸಿದ್ದರು.