ನ್ಯೂಸ್

ಇನ್ನೊಂದು ವಾರದಲ್ಲಿ ಅಮಿತಾಬ್​ ಬಚ್ಚನ್​, ಅಭಿಷೇಕ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​!

ಬಾಲಿವುಡ್ ನಟ ಅಮಿತಾಬ್ ಬಚ್ಚನ್​ಗೆ ಮತ್ತು ಅವರ ಮಗ ಅಭಿಷೇಕ್​ ಬಚ್ಚನ್​ಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ತೀವ್ರ ಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದು, ಇನ್ನೊಂದು ವಾರದಲ್ಲಿ ಇಬ್ಬರನ್ನೂ ಡಿಸ್ಚಾರ್ಜ್​ ಮಾಡಲಾಗುವುದೆಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಶನಿವಾರ ರಾತ್ರಿ, ಬಾಲಿವುಡ್​ನ ಬಿಗ್​ ಬಿ ಅಮಿತಾಬ್​​ ಬಚ್ಚನ್​ಗೆ ಕರೊನಾ ಪಾಸಿಟಿವ್​ ಇದೆ ಎಂದು ಸುದ್ದಿಯಾಗಿತ್ತು. ಕೆಲವೇ ಸಮಯದಲ್ಲಿ ಖುದ್ದು ಅಮಿತಾಭ್​ ಟ್ವೀಟ್​ ಮಾಡುವ ಮೂಲಕ ತಮಗೆ ಕರೊನಾ ಪಾಸಿಟಿವ್​ ಇರುವುದು ನಿಜ ಎಂದು ಹೇಳಿದ್ದರು. ಆ ನಂತರ ಅವರ ಮಗ ಅಭಿಷೇಕ್​ಗೂ ಕರೊನಾ ಪಾಸಿಟಿವ್ ಎಂದು ಅವರಿಬ್ಬರನ್ನೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

‘ಇಬ್ಬರ ಆರೋಗ್ಯದಲ್ಲಿ ಗಂಭೀರತೆ ಕಾಣಿಸಿಲ್ಲ. ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮುಂದಿನ ಏಳು ದಿನದಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗುವುದು’ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಇಬ್ಬರೂ ಚಿಕಿತ್ಸೆಗೆ ಸ್ಪಂದಿಸುತ್ತಿರುವುದರಿಂದ ಅವರಿಗೆ ತೀವ್ರವಾದ ಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು, ಇದೀಗ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಕರೊನಾ ಸೋಂಕಿತರಿಗೆ, ಅವರ ಖಾಯಿಲೆಯ ತೀವ್ರತೆ ನೋಡಿಕೊಂಡು, ಚಿಕಿತ್ಸೆ ನೀಡಲಾಗುತ್ತಿದೆ. ಅಮಿತಾಬ್​​ ಮತ್ತು ಅಭಿಷೇಕ್​ಗೆ ಮೊದಲ ಹಂತದಲ್ಲಿರುವುದರಿಂದ, ತೀವ್ರ ಚಿಕಿತ್ಸೆಯ ಅವಶ್ಯಕತೆ ಇಲ್ಲ, ಅವರಿಗೆ ಕೆಲವು ಬೇಸಿಕ್​ ಆದ ಔಷಧಿ ಮತ್ತು ಒಳ್ಳೆಯ ಆಹಾರ ನೀಡಲಾಗುತ್ತಿದೆ ಎಂದಿದ್ದಾರೆ.

ಇನ್ನು ಇತ್ತ ಅಭಿಮಾನಿ ವಲಯದಲ್ಲಿ ಬಚ್ಚನ್​ ಕುಟುಂಬ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹೋಮ ಹವನದ ಮೊರೆ ಹೋಗಿದ್ದಾರೆ. ಕೋಲ್ಕತ್ತದಲ್ಲಿ ಶೆಹನ್ಶಾ ದೇವಾಲಯದಲ್ಲಿ ಯಜ್ಞವನ್ನೂ ಹಮ್ಮಿಕೊಂಡಿದ್ದಾರೆ. (ಏಜೆನ್ಸೀಸ್​)