ಬೆಂಗಳೂರು: ಲೋಕಸಭೆ ಚುನಾವಣೆ ಕಣ ರಂಗೇರಲಾರಂಭಿಸಿದೆ. ಆಡಳಿತಾರೂಢ ಕಾಂಗ್ರೆಸ್ ಬಗ್ಗುಬಡಿಯಲು ಕೈಜೋಡಿಸಿರುವ ಬಿಜೆಪಿ, ಜೆಡಿಎಸ್ ಪಕ್ಷಗಳ ಮೈತ್ರಿ-ಶಕ್ತಿ ಪ್ರದರ್ಶನಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚನ್ನಪಟ್ಟಣ ಸಜ್ಜಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಆಗಮಿಸಲಿದ್ದು, ಕಾಂಗ್ರೆಸ್ನ ಭದ್ರಕೋಟೆಯನ್ನು ಭೇದಿಸುವ ಸಂಕಲ್ಪ ತೊಟ್ಟು ಮಂಗಳವಾರ ಕಹಳೆ ಮೊಳಗಿಸಲಿದ್ದಾರೆ. ಕೇಸರಿಕಲಿಗಳ ಈ ಮತ ಹೋರಾಟಕ್ಕೆ ಜೆಡಿಎಸ್ ನಾಯಕರು ಶಕ್ತಿ ತುಂಬಲಿದ್ದಾರೆ. ಇನ್ನು ಮೈತ್ರಿಪಕ್ಷಗಳ ಜಂಟಿ ಪ್ರಚಾರಕ್ಕೆ ಜೋಡೆತ್ತು ವಾಹನಗಳು ಅಣಿಯಾಗಿವೆ. ತೆರಿಗೆ ತಾರತಮ್ಯ ವಿಚಾರವಾಗಿ ಸಂಸತ್ತಿನ ಆವರಣದಲ್ಲಿ ‘ಪ್ರತ್ಯೇಕ ರಾಷ್ಟ್ರದ’ ಅಪಸ್ವರ ಎತ್ತಿದ್ದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ಕ್ಷೇತ್ರದಲ್ಲೇ ‘ಥೋಡೋ ವಿರುದ್ಧ ಜೋಡೋ’ ಕರ್ನಾಟಕದ ಚುನಾವಣಾ ಘೋಷಣೆ ಎಂಬುದನ್ನು ಅಮಿತ್ ಷಾ ಸಾರಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರವಾಗಿ ಅಮಿತ್ ಷಾ ಚನ್ನ ಪಟ್ಟಣದಲ್ಲಿ ಸಂಜೆ ನಡೆಯಲಿರುವ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಅಖಾಡಕ್ಕೆ ಶೀಘ್ರ ಜೋಡೆತ್ತು ರಥ: ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷಗಳ ಜೋಡೆತ್ತು ವಾಹನಗಳು ಪ್ರಚಾರಕ್ಕೆ ಅಣಿಯಾಗಿವೆ. ಬಿಜೆಪಿ ಪ್ರಚಾರ ವಾಹನಗಳು ಈ ಬಾರಿ ಕೇಸರಿ ಜತೆಗೆ ಹಸಿರು ಲೇಪಿತವಾಗಿವೆ. ಕಮಲದ ಜತೆಗೆ ತೆನೆಹೊತ್ತ ಮಹಿಳೆ ಚಿಹ್ನೆ ರಾರಾಜಿಸುತ್ತಿದೆ.
ಆರು ಕೋರ್ ಕಮಿಟಿ ಸಭೆ: ಈ ಮೊದಲು ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಗಳ ಪ್ರತ್ಯೇಕ ಕೋರ್ ಕಮಿಟಿ ಸಭೆ ನಿಗದಿಯಾಗಿದ್ದವು. ಇದರೊಂದಿಗೆ ಬೀದರ್ ಮತ್ತು ಬೆಳಗಾವಿ ಕೋರ್ ಕಮಿಟಿ ಸಭೆಗಳು ಫಿಕ್ಸ್ ಆಗಿವೆ. ಆರು ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರ ಅಸಮಾಧಾನ, ಮುಖಂಡರ ಮುನಿಸು ತಾರಕಕ್ಕೆ ಹೋಗಿ ಕ್ರಮೇಣ ಸಹಜ ಸ್ಥಿತಿಗೆ ಬಂದಿವೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತವರ ತಂಡವು ರಾಜಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಲೋಕಸಭೆ ಕ್ಷೇತ್ರಾವಾರು ಕೋರ್ ಕಮಿಟಿ ಸಭೆಗಳಿಗೆ 6 ಕ್ಷೇತ್ರಗಳನ್ನು ಅಮಿತ್ ಷಾ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ. ಮಧ್ಯಾಹ್ನ 2.20- 3.50ರವರೆಗೆ ಅಮಿತ್ ಷಾ ಮೀಟಿಂಗ್ಗೆ ಮೀಸಲಿರಿಸಿದ್ದಾರೆ.