ಮುಂಬೈ: ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದ ನಟ ಅಮೀರ್ ಖಾನ್ ಇತ್ತೀಚೆಗೆಷ್ಟೇ ತಮ್ಮ ಮುಂದಿನ ಸಿನಿಮಾ ಯಾರೊಂದಿಗೆ ಮತ್ತು ಯಾವ ಚಿತ್ರ ಎಂಬುದನ್ನು ಅಭಿಮಾನಿಗಳ ಮುಂದೆ ಬಹಿರಂಪಡಿಸಿದ್ದರು. ಇದೀಗ ಈ ಮಧ್ಯೆ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ತಮ್ಮ ಮತ್ತೊಂದು ಹೊಸ ಸಿನಿಮಾ 'ಸಿತಾರೆ ಜಮೀನ್ ಪರ್' ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಸನ್ನಿ ಡಿಯೋಲ್ ಅವರೊಂದಿಗೆ 'ಲಾಹೋರ್ 1947' ಎಂಬ ಹೊಸ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ತಮ್ಮ ಮುಂದಿನ ಮತ್ತೊಂದು ಯೋಜನೆಯಾದ 'ಸಿತಾರೆ ಜಮೀನ್ ಪರ್' ಅನ್ನು ಅಧಿಕೃತವಾಗಿ ಘೋಷಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕರು ಅಚ್ಚರಿಗೊಂಡಿದ್ದು, ಇದು 'ತಾರೆ ಜಮೀನ್ ಪರ್' ಚಿತ್ರದ ಮುಂದಿನ ಭಾಗವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಕನ್ನಿಂಗ್ ಹ್ಯಾಮ್ ರೋಡ್ ಬಸ್ ನಿಲ್ದಾಣ ಕಳ್ಳತನ ಕೇಸ್ಗೆ ಬಿಗ್ಟ್ವಿಸ್ಟ್: ತನಿಖೆಯಿಂದ ಬಯಲಾಯ್ತು ಅಸಲಿ ಸತ್ಯ
ಆರ್.ಎಸ್ ಪ್ರಸನ್ನ ನಿರ್ದೇಶಿಸಲಿರುವ ಈ ಚಿತ್ರವು ಭಾಗಶಃ ಈ ಹಿಂದೆ ಬಿಡುಗಡೆಗೊಂಡು ಬ್ಲಾಕ್ಬಸ್ಟರ್ ಹಿಟ್ ಆಗಿದ್ದ 'ತಾರೆ ಜಮೀನ್ ಪರ್' ಸಿನಿಮಾದ ಸೀಕ್ವೆಲ್ ಎಂದು ಹೇಳಲಾಗಿದೆ. ಚಿತ್ರದ ಚಿತ್ರೀಕರಣ ಜನವರಿ 2024 ರಲ್ಲಿ ಪ್ರಾರಂಭವಾಗಲಿದ್ದು, ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. ಪಾತ್ರವರ್ಗ ಮತ್ತು ಹೆಚ್ಚಿನ ಮಾಹಿತಿ ಕುರಿತು ಶೀಘ್ರವೇ ಪ್ರಕಟವಾಗಲಿದೆ,(ಏಜೆನ್ಸೀಸ್).