

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರೋಡ್ನಲ್ಲಿ ಬಸ್ ನಿಲ್ದಾಣವೇ ಕಳ್ಳತನ ಆಗಿತ್ತು. ಕಳ್ಳತನ ಆಗಿದೆ ಎಂದು ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿತ್ತು. ಆದರೆ ಇದೀಗ ಅಸಲಿ ರಹಸ್ಯ ಬಯಲಾಗಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ: ಸೆಪ್ಟೆಂಬರ್ 30 ರಂದು ಬಿಎಂಟಿಸಿ ಬಸ್ ತಂಗುದಾಣಗಳನ್ನು ನಿರ್ಮಿಸುವ ಕಂಪನಿಯಾದ ಸೈನ್ಫೋಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಹಾಯಕ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಅವರು ಆಗಸ್ಟ್ 21 ರಂದು ನಿರ್ಮಿಸಲಾದ ಸ್ಟೀಲ್ ಬಸ್ ತಂಗುದಾಣ ಕಳೆದು ಹೋಗಿದೆ. ಆಗಸ್ಟ್ 28ರಂದು ಬಂದು ನೋಡಿದಾಗ ಬಸ್ ತಂಗುದಾಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ, ನಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಕಂಪನಿಯ ಸಹ ಉಪಾಧ್ಯಕ್ಷ ಎನ್.ರವಿ ರೆಡ್ಡಿ ಅವರು ಬಸ್ ತಂಗುದಾಣ ಕಳ್ಳತನವಾಗಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬೆಂಗಳೂರು ಕಮಿಷನರ್ ಕಚೇರಿ ಹಿಂಭಾಗದಲ್ಲೇ ಬಸ್ ನಿಲ್ದಾಣ ಕಳವಾಗಿದೆ ಅಂತ ದೊಡ್ಡ ಸುದ್ದಿ ಆಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟೀಕೆಗೂ ಕಾರಣವಾಗಿತ್ತು. ಈ ಪ್ರಕರಣದ ಅಸಲಿ ಸತ್ಯ ಭೇದಿಸಿದ ಪೊಲೀಸರು, ಕಳವು ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.
ಬಸ್ ತಂಗುದಾಣ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್: ಪ್ರಕರಣದ ತನಿಖೆ ಕೈಗೊಂಡ ಹೈಗೌಂಡ್ಸ್ ಪೊಲೀಸರು, ಖಾಸಗಿ ಕಂಪನಿಯಿಂದ ಬಸ್ ನಿಲ್ದಾಣ ಮಾಡಲು ಮುಂದಾಗಿತ್ತು. ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಕೂಡ ಪಡೆದಿದ್ದ ರವಿರೆಡ್ಡಿ ಅವರು ಆಗಸ್ಟ್ 21ರಂದು ಬಸ್ ಸ್ಟ್ಯಾಂಡ್ ಕೆಲಸವನ್ನು ಶುರು ಮಾಡಿಸಿದ್ದರು. ಆದರೆ, ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬ ಮಾಹಿತಿ ಹಿನ್ನೆಲೆ ಶಿವಾಜಿನಗರದದ ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರಿಗೆ (ಎಇಇ) ಸ್ಥಳ ಪರಿಶೀಲಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಅನಂತರ ಬಸ್ ಸ್ಟ್ಯಾಂಗ್ ಶೆಲ್ಟರ್ ಅನ್ನು ಬಿಬಿಎಂಪಿಯಿಂದ ಸೀಜ್ ಮಾಡಲಾಗಿತ್ತು. ನಂತರ ಅದನ್ನು ಗೋಡ್ನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು. ಇದನ್ನು ಅರಿಯದೆ, ಮೆಟಿರೀಯಲ್ ಕಾಣೆಯಾಗಿರೋದನ್ನು ಗಮನಿಸಿದ ರವಿರೆಡ್ಡಿ ಸೆಪ್ಟೆಂಬರ್ 30 ರಂದು ಮತ್ತೆ ಹೈರೌಂಡ್ಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ದೂರು ಪಡೆದು ತನಿಖೆ ಮಾಡಿದಾಗ ಅಸಲಿ ಸತ್ಯ ಬಯಲಾಗಿದ್ದು, ಸದ್ಯ ರವಿ ರೆಡ್ಡಿ ವಿರುದ್ಧವೇ ದೂರು ನೀಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ
ಅಸಲಿ ಕಹಾನಿ ಪತ್ತೆ ಹಚ್ಚಿದ ಪೊಲೀಸರು: ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪ್ರತಿಕ್ರಿಯಿಸಿದ್ದು, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಬಸ್ ಶೆಲ್ಟರ್ ಕಾಣೆಯಾಗಿದೆ ಎಂದು ದೂರು ಬಂದ ಮೇರೆಗೆ ಪ್ರಕರಣ ದಾಖಲಾಗಿತ್ತು, ತನಿಖೆ ನಡೆಸಿದಾಗ ಬಸ್ ಶೆಲ್ಟರ್ ಕಳ್ಳತನವಾಗಿರಲಿಲ್ಲ. ಎಂಬುವುದು ಗೊತ್ತಾಗಿತ್ತು. ಕಳಪೆ ಕಾಮಗಾರಿ ಆಗಿದ್ದರಿಂದ ಬಿಬಿಎಂಪಿಯೇ ತೆರವು ಮಾಡಿತ್ತು ಅನ್ನೋ ಅಸಲಿ ವಿಷ್ಯ ಬಯಲಾಗಿದೆ.
ತಂಗುದಾಣ ಕಳ್ಳತನವಾಗಿಲ್ಲ, ಬಿಬಿಎಂಪಿಯಿಂದಲೇ ತೆರವು: ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆ ತೆರವುಗೊಳಿಸಿದ್ದರು. ಸೈನ್ ಪೋಸ್ಟ್ ಕಂಪನಿಯವರು ವಿನಾ ಕಾರಣ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದೆವು. ತನಿಖೆ ವೇಳೆ ಅಸಲಿ ಸತ್ಯ ಬಯಲಾಗಿದೆ. ಕಳೆದ ತಿಂಗಳು ಶಿವಾಜಿನಗರ ಕಾರ್ಯಪಾಲಕ ಅಭಿಯಂತರರು ಇದನ್ನು ತೆರವುಗೊಳಿಸಿದ್ದರು. ಸದ್ಯ ತನಿಖೆ ಮೂಲಕ ಸತ್ಯಾಂಶ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ ಸುಳ್ಳು ದೂರು ನೀಡಿದ್ದ ರವಿರೆಡ್ಡಿಗೆ ಬಿಬಿಎಂಪಿ ನೊಟೀಸ್ ನೀಡಿದ್ದು, ಉತ್ತರ ಬಯಸಿದೆ. ಜತೆಗೆ ರವಿರೆಡ್ಡಿ ಮೇಲೆ ದೂರು ನೀಡಲು ಸಹ ಬಿಬಿಎಂಪಿ ಮುಂದಾಗಿದೆ.